ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ನಡೆಯುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಇಂದಿನ ಆರ್‌ಸಿಬಿ- ಹೈದರಾಬಾದ್ ಪಂದ್ಯ ಬೆಂಗಳೂರು ತಂಡದ ತವರು ಮೈದಾನ ಚಿನ್ನಸ್ವಾಮಿಯಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಸಿಲಿಕಾನ್ ಸಿಟಿಯಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿರುವ ಕಾರಣ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಯಿತು.
ಈ ಪಂದ್ಯವನ್ನು ಗೆಲ್ಲುವ ಮೂಲಕ ಆರ್‌ಸಿಬಿ ಒಂಬತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಲೀಗ್ ಹಂತದಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದೆ. 2016 ರ ಋತುವಿನಲ್ಲಿ ಆರ್‌ಸಿಬಿ ರನ್ನರ್ ಅಪ್ ಆಗಿತ್ತು, ಆದರೆ ಅಂದಿನಿಂದ ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದಿಲ್ಲ. ತಂಡವು ಪ್ರಸ್ತುತ 12 ಪಂದ್ಯಗಳಿಂದ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಉಳಿದ ಎರಡು ಪಂದ್ಯಗಳಲ್ಲಿ ಗೆದ್ದರೆ ಅಗ್ರ-ಎರಡು ಸ್ಥಾನಗಳನ್ನು ಖಚಿತ ಪಡಿಸಲಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷದಿಂದಾಗಿ ಲೀಗ್ ಸ್ಥಗಿತಗೊಳ್ಳುವ ಮೊದಲು ಆರ್‌ಸಿಬಿ ಉತ್ತಮ ಫಾರ್ಮ್‌ನಲ್ಲಿತ್ತು, ಸತತ ನಾಲ್ಕು ಗೆಲುವುಗಳನ್ನು ದಾಖಲಿಸಿತು. ಆದರೆ ಲೀಗ್ ಪುನರಾರಂಭವಾದ ನಂತರ, ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಲಯಕ್ಕೆ ಅಡ್ಡಿಯಾಯಿತು. 20 ದಿನಗಳ ವಿರಾಮದ ನಂತರ, ತಂಡವು ತನ್ನ ಆವೇಗ ಮತ್ತು ಲಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆಯೇ ಎಂದು ನೋಡಲು ಆಸಕ್ತಿದಾಯಕವಾಗಿದೆ. ಪಂದ್ಯದ ಟಾಸ್ ಸಂಜೆ 7.00 ಗಂಟೆಗೆ ನಡೆಯಲಿದೆ. ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ಪಂದ್ಯದ ಸಮಯದಲ್ಲಿ ಲಕ್ನೋದಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ಆದರೆ ಮಳೆ ಬರುವ ಸಾಧ್ಯತೆ ಬಹುತೇಕ ನಗಣ್ಯ. ಲಕ್ನೋದಲ್ಲಿ ಇಂದು ತಾಪಮಾನ 36 ಡಿಗ್ರಿಯಿಂದ 30 ಡಿಗ್ರಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಎಲ್ಲಾದರು ಮಳೆಯಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ರದ್ದಾದರೆ ಅಥವಾ ಸೋತರೆ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆಯುವ ಆರ್‌ಸಿಬಿಯ ಆಸೆಗೆ ದೊಡ್ಡ ಹೊಡೆತ ಬೀಳಲಿದೆ.