ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರದ ಬಡವರ, ಕೂಲಿಕಾರ್ಮಿಕರ ಹಾಗೂ ಸ್ಲಂ ಜನರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿರುವ ಆಹಾರ ಇಲಾಖೆ ಅಧಿಕಾರಿಗಳ ಜನವಿರೋಧಿ ಕ್ರಮವನ್ನು ಖಂಡಿಸಿ, ವಿನಾಕಾರಣ ಅರ್ಹ ಫಲಾನುಭವಿಗಳ ಸಾವಿರಾರು ಕಾರ್ಡ್ಗಳನ್ನು ರದ್ದುಗೊಳಿಸಿರುವ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರನ್ನು ಕೂಡಲೇ ಅಮಾನತು ಮಾಡಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ ಮಾತನಾಡಿ, ಗದಗ ಆಹಾರ ಇಲಾಖೆ ಅಧಿಕಾರಿಗಳು ಏಕಾಏಕಿ ಸಾವಿರಾರು ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿದ್ದರಿಂದ ಬಡವರು ಪಡಿತರ ಆಹಾರ ಧಾನ್ಯಗಳು ಪರಿತಪಿಸುವಂತಾಗಿದೆ. ಉಳ್ಳವರ ಪಡಿತರ ಚೀಟಿಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿ ರದ್ದುಗೊಳಿಸಲಿ. ಆದರೆ, ಅಧಿಕಾರಿಗಳು ಯಾವುದೇ ಸಮೀಕ್ಷೆಯನ್ನು ನಡೆಸದೇ, ಮುಂಚಿತವಾಗಿ ಫಲಾನುಭವಿಗಳಿಗೆ ನೋಟಿಸ್ ನೀಡದೇ, ಪಡಿತರ ಅಂಗಡಿಗಳ ಮುಂದೆ ಮಾಹಿತಿಯನ್ನು ಹಚ್ಚದೇ ಏಕಾಏಕಿಯಾಗಿ ಕಾರ್ಡ್ ರದ್ದುಗೊಳಿಸಿರುವುದು ಖಂಡನೀಯ ಎಂದರು.
ಆಹಾರ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ಸಾವಿರಾರು ಬಡ ಕುಟುಂಬಗಳಿಗೆ ಒಂದು ಹೊತ್ತು ಅನ್ನಕ್ಕೂ ಇಲ್ಲದೇ ಉಪವಾಸ ಬಿಳಿ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಪಡಿತರ ಚೀಟಿಗಳ ರದ್ದುಗೊಳಿಸಲು ಬಂದಿರುವ ಮಾರ್ಗಸೂಚಿಯನ್ನು ಮರು ಪರಿಶೀಲಿಸಲು ಹೇಳಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಆದರೆ ಗದಗ ಆಹಾರ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರದ ಸೂಚನೆಯನ್ನು ಸರಿಯಾಗಿ ತಿಳಿದುಕೊಳ್ಳದೇ ತಮ್ಮ ಮನಬಂದತೆ ಏಕಾಏಕಿಯಾಗಿ ಸಾವಿರಾರು ಕಾರ್ಡ್ಗಳನ್ನು ರದ್ದುಗೊಳಿಸಿ ಬಡ ಕುಟುಂಬಗಳನ್ನು ಬೀದಿಗೆ ತಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡರಾದ ಮೌಲಾಸಾಬ ಗಚ್ಚಿ, ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೆಹಬೂಬಸಾಬ ಬಳ್ಳಾರಿ, ಸಲೀಂ ಹರಿಹರ, ಶೇಖಪ್ಪ ರೋಣ, ಖಾಜಾಸಾಬ ಇಸ್ಮಾಯಿಲನವರ, ಗೌಸಸಾಬ ಅಕ್ಕಿ, ಮೆಹಬೂಬ ಮುಲ್ಲಾ, ಬಸವರಾಜ ಕಳಸದ, ರಿಜ್ವಾನ ಮುಲ್ಲಾ, ಮಕ್ತುಮಸಾಬ ಮುಲ್ಲಾನವರ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೂಡಲೇ ಇದಕ್ಕೆ ಕಾರಣರಾಗಿರುವ ಆಹಾರ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಬಡವರ ವಿರೋಧಿ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು, ಈಗ ರದ್ದುಗೊಂಡಿರುವ ಕಾರ್ಡ್ಗಳನ್ನು ಮರು ಪರಿಶೀಲನೆ ನಡೆಸುವರೆಗೊ ಅನ್ಯಾಯಕ್ಕೆ ಒಳಗಾಗಿರುವ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಇಮ್ತಿಯಾಜ್ ಮಾನ್ವಿ ವಿನಂತಿಸಿದರು.



