ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳಲ್ಲಿ ಓದುವಿಕೆಯಿಂದ ಜ್ಞಾನದ ಹರಿವು ವೃದ್ಧಿಸುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಓದುವ ಕೌಶಲ್ಯವನ್ನು ವೃದ್ಧಿಪಡಿಸಲು ಪ್ರೋತ್ಸಾಹದಾಯಕವಾಗಿ ಹಲವಾರು ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನ ಲಿಟರೇಚರ್ ಕಮಿಟಿ ಚೇರಮನ್ ಸುಮಾ ಪಾಟೀಲ ಹೇಳಿದರು.
ಅವರು ಮಂಗಳವಾರ ಗದಗ ಶಹರದ ಎಸ್.ಎಂ. ಕೃಷ್ಣಾ ನಗರದ ಸರಕಾರಿ ಶಾಲೆ ನಂ.12ರಲ್ಲಿ ಕ್ಲಬ್‌ನಿಂದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಓದುವ ಕೌಶಲ್ಯ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನ ಮಾರನಬಸರಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಸಂದೇಶಯುಕ್ತ ಮೌಲ್ಯಾಧಾರಿತ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದುವುದರಿಂದ ಅವರಲ್ಲಿ ಸೃಜನಶೀಲತೆ ಬೆಳೆದುಬರುತ್ತದೆ ಎಂದರು.
ಕಾರ್ಯದರ್ಶಿ ವೀಣಾ ತಿರ್ಲಾಪೂರ ಮಾತನಾಡಿ, ಪಾಲಕರು ಮಕ್ಕಳಿಗೆ ಓದುವಿಕೆಯಂತಹ ಸೃಜನಶೀಲ ಹವ್ಯಾಸಗಳನ್ನು ರೂಢಿಸಬೇಕು. ಟಿ.ವ್ಹಿ, ಮೊಬೈಲ್ ಗೀಳಿನಿಂದ ಮಕ್ಕಳು ದೂರ ಇರುವದು ಒಳ್ಳೆಯದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಎಚ್.ಆರ್. ಕೋಣಿಮನಿ ಮಾತನಾಡಿದರು. ಕಾರ್ಯಕ್ರಮದ ಪ್ರಾಯೋಜತ್ವವನ್ನು ಮೀನಾಕ್ಷಿ ಕೋರವನವರ ವಹಿಸಿದ್ದರು. ಐಎಸ್‌ಓ ಪುಷ್ಪಾ ಭಂಡಾರಿ ಉಪಸ್ಥಿತರಿದ್ದರು. ವ್ಹಿ.ಜಿ. ಪಾಟೀಲ ಪ್ರಾರ್ಥಿಸಿದರು, ಎಸ್.ಬಿ. ಕನಕಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಯು. ವಕ್ಕಳದ ನಿರೂಪಿಸಿದರು. ಚಾಮರಾಜ ಹುಡೇದ ವಂದಿಸಿದರು.
ಎಂ.ಎಚ್. ಬಳಬಟ್ಟಿ, ಎಸ್.ಟಿ. ಲಮಾಣಿ, ಎಸ್.ಬಿ. ದೊಡ್ಡಮನಿ, ಎ.ಎಂ. ಕೆಂಚರಡ್ಡಿಯವರ, ಜಗದೀಶ ಶೀಲವಂತರ, ಎಂ.ಕೆ. ಹುಯಿಲಗೋಳ, ಆರ್.ಸಿ. ಬಾಗೇವಾಡಿ ಉಪಸ್ಥಿತರಿದ್ದರು.
Advertisement