ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಕರ್ಪೂರು ಗೇಟ್ ಬಳಿ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅಲಿಯಾಸ್ ಗೋಪಿ ಕಿಡ್ನ್ಯಾಪ್ ಆಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೊನ್ನಕಳಸಾಪುರ ಗ್ರಾಮದ ನಿವಾಸಿ ಗೋಪಾಲ್, ಮಾರ್ಚ್ 8ರಂದು ಸಂಜೆ 7.30ರ ಸುಮಾರಿಗೆ ಕಿಡ್ನ್ಯಾಪ್ ಆಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಗೋಪಾಲ್ ರಿಯಲ್ ಎಸ್ಟೇಟ್ ಮತ್ತು ಹಣಕಾಸು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು.
ಕುಟುಂಬದ ಆರೋಪದ ಪ್ರಕಾರ, ಕರ್ಪೂರು ಗೇಟ್ ಬಳಿ ಗೋಪಾಲ್ ಹಾಗೂ ಸತೀಶ್ ಇದ್ದ ಕಾರಿಗೆ ವಾಹನದಿಂದ ಡಿಕ್ಕಿ ಹೊಡೆದು ಕಿಡಿಗೇಡಿಗಳು ಸ್ಪ್ರೇ ಬಳಸುವ ಮೂಲಕ ದಾಳಿ ನಡೆಸಿ ಅವರನ್ನು ಅಪಹರಿಸಿದ್ದಾರೆ.
ಘಟನೆಯ ನಂತರ, ಜಿಗಣಿ ಪೊಲೀಸರು, ಮೂರು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ಆರೋಪಿಗಳಾದ ಮೋಹನ್ ಬಾಬು, ಹರೀಶ್ ಮತ್ತು ಕಿರಣ್ ಅವರನ್ನು ಗೋಪಾಲ್ ಪತ್ನಿಯ ಆರೋಪದ ಆಧಾರದ ಮೇಲೆ ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಇಂದು ಬೆಳಗಿನ 9 ಗಂಟೆಗೆ 7 ವಿಶೇಷ ಶೋಧ ತಂಡಗಳನ್ನು ರಚಿಸಿ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಬೆಂಗಳೂರಿನ ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಮತ್ತು ಹೆಚ್ಚುವರಿ ಎಸ್ಪಿ ವೆಂಕಟೇಶ್ ಪ್ರಸನ್ನ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಪೊಲೀಸರು ಅಪಹರಣಗೊಂಡ ಗೋಪಾಲರನ್ನು ಶೀಘ್ರ ಪತ್ತೆಹಚ್ಚಲು ಎಲ್ಲಾ ದಿಕ್ಕುಗಳಲ್ಲಿ ತೀವ್ರ ತನಿಖೆ ನಡೆಸುತ್ತಿದ್ದಾರೆ.



