ಬೆಂಗಳೂರು: ಆನೇಕಲ್ನಲ್ಲಿ ಅಪಹರಣಗೊಂಡಿದ್ದ ರಿಯಲ್ ಎಸ್ಟೇಟ್ ಏಜೆಂಟ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಪ್ರಾಪ್ತ ಸೇರಿ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಮೋಹನ್ ಬಾಬು, ತೇಜಸ್, ದರ್ಶನ್, ಲಿಖಿತ್, ನಿಖಿಲ್, ಆನಂದ್ ಮತ್ತು ಪ್ರಶಾಂತ್ ಸೇರಿದ್ದಾರೆ.
ಮೃತ ಗೋಪಾಲ್ ಅಲಿಯಾಸ್ ಗೋಪಿ ಹೊನ್ನಕಳಶಾಪುರ ನಿವಾಸಿಯಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮದಿಂದ ವಾಪಸ್ಸಾಗುತ್ತಿದ್ದ ವೇಳೆ ಅತ್ತಿಬೆಲೆ–ಆನೇಕಲ್ ಮಾರ್ಗದ ಕರ್ಪೂರು ಬಳಿ ಆರೋಪಿಗಳು ಕಾರು ಡಿಕ್ಕಿ ಹೊಡೆದು ನಿಲ್ಲಿಸಿ, ಪೆಪ್ಪರ್ ಸ್ಪ್ರೇ ಬಳಸಿ ಗೋಪಾಲ್‌ನನ್ನು ಅಪಹರಿಸಿದ್ದರು.
ಈ ಪ್ರಕರಣದ ಬಳಿಕ ಗೋಪಾಲ್ ಮೃತದೇಹ ತಮಿಳುನಾಡಿನ ಡೆಂಕಣೀಕೋಟೆ ಬಳಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಆನೇಕಲ್ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಕಿಡ್ನ್ಯಾಪ್‌ಗೆ ಬಳಸಿದ್ದ ಹುಂಡೈ ಕಾರನ್ನು ವಶಕ್ಕೆ ಪಡೆದಿದ್ದಾರೆ.
ತನಿಖೆಯಲ್ಲಿ ಹಳೆಯ ದ್ವೇಷವೇ ಈ ಕೊಲೆಗೆ ಕಾರಣ ಎಂಬುದು ತಿಳಿದುಬಂದಿದೆ. ಗೋಪಾಲ್ ಮದುವೆಯಾದ ಸ್ವಾತಿ ಎಂಬ ಯುವತಿಯನ್ನು ಮದುವೆಯಾಗಲು ಬಯಸಿದ್ದ ಮೋಹನ್ ಬಾಬುಗೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ವೈಷಮ್ಯ ಉಂಟಾಗಿತ್ತು. ಇದೇ ಕಾರಣದಿಂದ 25 ಲಕ್ಷ ರೂ. ಸುಪಾರಿ ನೀಡಿ ಅಪಹರಣ ಮಾಡಿ ಕೊಲೆ ಮಾಡಿಸಿದ್ದಾಗಿ ಆರೋಪಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



