ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಬಾಳಿನ ಭಾಗ್ಯೋದಯಕ್ಕೆ ಶಿಕ್ಷಣದ ಕಿರಣಗಳು ಅವ್ಯಶಕ. ಅಂತರಂಗದ ಕತ್ತಲೆ ಕಳೆದು ಜನಮನ ಜಾಗೃತ, ವ್ಯಕ್ತಿತ್ವ ವಿಕಸನಗೊಳಿಸುವುದು ಶಿಕ್ಷಣದ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಭಾನುವಾರ ಲಕ್ಮೇಶ್ವರ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಅಮೃತ ಮಹೋತ್ಸವ ಹಾಗೂ ಬಳಗದ ಪ್ರೌಢಶಾಲೆ ಮತ್ತು ಜ.ರೇಣುಕಾಚಾರ್ಯ ಸಂಸ್ಕೃತ ಪಾಠಶಾಲೆಯ ಸುವರ್ಣ ಮಹೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ವಿದ್ಯೆ ಸಾಧಕನ ನಿಜವಾದ ಸ್ವತ್ತು-ಸಂಪತ್ತು ಎಂಬುದನ್ನು ಯಾರೂ ಮರೆಯಬಾರದು. ಶಿಕ್ಷಣದಿಂದ ಬುದ್ಧಿ ಶಕ್ತಿ ಬೆಳೆದರೆ ಧರ್ಮದಿಂದ ಭಾವನೆಗಳು ಬೆಳೆಯುತ್ತವೆ. ಬದುಕಿ ಬಾಳುವ ಮನುಷ್ಯನಿಗೆ ಬುದ್ಧಿ ಶಕ್ತಿ ಮತ್ತು ಮೌಲ್ಯಯುತ ಭಾವನೆಗಳೆರಡೂ ಬೆಳೆದುಕೊಂಡು ಬರಬೇಕು. ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯದ ವಿಚಾರಗಳಲ್ಲಿ ಯಾವತ್ತೂ ರಾಜಕೀಯ ಪ್ರವೇಶ ಮಾಡಬಾರದು. ಲಿಂ.ಶ್ರೀಮದ್ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ಸಂಕಲ್ಪದೊಂದಿಗೆ ಪ್ರಾರಂಭಗೊಂಡ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಸಂಸ್ಥೆಯ ಹಿಂದಿನ ಪದಾಧಿಕಾರಿಗಳು ಮತ್ತು ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಹಲವಾರು ವಿಭಾಗಗಳನ್ನು ಹುಟ್ಟು ಹಾಕಿ ಬೆಳೆಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮತ್ತು ಮೈಸೂರು ಅರಮನೆ ಜಪದಕಟ್ಟೆಮಠದ ಡಾ. ಮುಮ್ಮಡಿ ಶಿವಾಚಾರ್ಯರು ಮಾತನಾಡಿ, ಪರಿಶ್ರಮವಿಲ್ಲದೇ ಶಿಕ್ಷಣ ಪ್ರಾಪಿಯಾಗದು. ವಿನಯವಿಲ್ಲದ ವಿದ್ಯೆ ವ್ಯರ್ಥ. ಮಹಿಳೆಯರಿಂದ, ಮಹಿಳೆಯರ ಅಭ್ಯುಧಯಕ್ಕಾಗಿ ಹುಟ್ಟಿಕೊಂಡ ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಸಂಸ್ಥೆಯು ಇದೀಗ ಸಂಸ್ಥೆಯು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಸಂಸ್ಕೃತಿ ಅರುಹುವ ಜಾಗೃತ ಸ್ಥಳವಾಗಲೆಂದು ಆಶಿಸಿದರು.
ಲಕ್ಮೇಶ್ವರದ ಕರೆವಾಡಿಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು. ಶ್ರೀ ತಾಯಿ ಪಾ.ಮ.ಬಳಗದ ಅಧ್ಯಕ್ಷೆ ಸುವರ್ಣಬಾಯಿ ಬಿ.ಬಹದ್ದೂರದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಬಳಗದ ಕಾರ್ಯದರ್ಶಿ ಜಯಲಕ್ಷ್ಮೀ ಜಿ.ಗಡ್ಡದ್ದೇವರಮಠ, ಲಲಿತಕ್ಕ ಕೆರಿಮನಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ, ಪುರಸಭೆ ಅಧ್ಯಕ್ಷರಾದ ಯಲ್ಲಮ್ಮ ದುರಗಣ್ಣವರ, ರೋಹಿಣಿಬಾಯಿ ಬಹದ್ದೂರದೇಸಾಯಿ, ಶಾರದಾ ಮಹಾಂತಶೆಟ್ಟರ, ಗೌರಮ್ಮ ಮಹಾಂತಶೆಟ್ಟರ, ಪಾರ್ವತಮ್ಮ ಪುರಾಣಿಕಮಠ, ರಾಜೇಶ್ವರಿ ಪಾಟೀಲ, ಸಾವಂತ್ರಮ್ಮ ಹೂವಿನ, ಶರಣಮ್ಮ ಅಂಬಯ್ಯಸ್ವಾಮಿಮಠ, ಶಿವಲೀಲಾ ಹಿರೇಮಠ, ಸುವರ್ಣಕ್ಕ ಮಲ್ಲಾಡದ ಮುಂತಾದವರಿದ್ದರು.
ಬಳಗದ ಉಪಾಧ್ಯಕ್ಷರಾದ ಜಯಲಕ್ಷ್ಮೀ ಎಸ್.ಮಹಾಂತಶೆಟ್ಟರ ಸ್ವಾಗತಿಸಿದರು. ಸದಸ್ಯೆ ರಾಜೇಶ್ವರಿ ಪಾಟೀಲ ಪ್ರಾಸ್ತಾವಿಕ ನುಡಿದರು.
ಅಮೃತ ಸುವರ್ಣ ಸೌಧದ ಉದ್ಘಾಟನೆ, ಶಾಲಾ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ದೇಶದ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಣ ಕ್ಷೇತ್ರದ್ದಾಗಿದೆ. ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮೌಲ್ಯಾಧಾರಿತ ಸಮಗ್ರ ಶಿಕ್ಷಣ ಕೊಡಬೇಕು. ಇಂದು ಮಕ್ಕಳ ಬೆಸ್ಟ್ ಫ್ರೆಂಡ್ ಮೊಬೈಲ್, ಟಿವಿ ಆಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮನೆಯೇ ಮೊದಲ ಪಾಠಶಾಲೆಯಾಗಿದ್ದು ಪಾಲಕರು ತಮ್ಮ ಬದುಕಿನ ಒತ್ತಡದ ನಡುವೆಯೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಮಯ ಕೊಡಬೇಕು. ಆ ಸಮಯದಲ್ಲಿ ಮಕ್ಕಳೊಂದಿಗಿನ ಬಾಂಧವ್ಯ ಗಟ್ಟಿಗೊಳಿಸಬೇಕು. ಮೂಲ ಶಿಕ್ಷಣ ಜೀವನ ಮೌಲ್ಯಗಳನ್ನು ತಿಳಿಸಬೇಕು ಎಂದರು.