ಕನ್ನಡ ಚಿತ್ರರಂಗದಲ್ಲಿ 18 ವರ್ಷಗಳ ಹಿಂದೆ ‘ಆ ದಿನಗಳು’ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ಕೆ.ಎಂ. ಚೈತನ್ಯ, ಇದೀಗ ‘ಬಲರಾಮನ ದಿನಗಳು’ ಚಿತ್ರದೊಂದಿಗೆ ಮತ್ತೆ ಸುದ್ದಿಯಾಗಿದ್ದಾರೆ. ವಿನೋದ್ ಪ್ರಭಾಕರ್ ಅಭಿನಯದ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ‘ಶುರು ಶುರು..’ ಹಾಡು ಬಿಡುಗಡೆಯಾಗುವ ಮೂಲಕ ಪ್ರಚಾರ ಕಾರ್ಯ ಆರಂಭವಾಗಿದೆ.
ಈ ಸಿನಿಮಾ ವಿನೋದ್ ಪ್ರಭಾಕರ್ ನಟನೆಯ 25ನೇ ಸಿನಿಮಾ ಎಂಬುದು ವಿಶೇಷ. ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್ ನಟಿಸಿದ್ದು, ಇದು ಅವರ ಕನ್ನಡದ ಐದನೇ ಚಿತ್ರವಾಗಿದೆ. ಈ ಮೊದಲು ಪುನೀತ್ ರಾಜ್ಕುಮಾರ್ ಜೊತೆ ‘ರಾಜಕುಮಾರ’ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾ ಆನಂದ್, ಕನ್ನಡ ಕಲಿಯಲು ಪುನೀತ್ ರಾಜ್ ಕುಮಾರ್ ಕಾರಣ ಎಂದು ಕಾರ್ಯಕ್ರಮದಲ್ಲಿ ಹೇಳಿ ಮೆಚ್ಚುಗೆ ಪಡೆದರು.
ಚಿತ್ರದಲ್ಲಿ ಅವಿನಾಶ್, ಅತುಲ್ ಕುಲಕರ್ಣಿ, ವಿನಯ್ ಗೌಡ, ಆಶಿಶ್ ವಿದ್ಯಾರ್ಥಿ ಸೇರಿದಂತೆ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ವಿನಯ್ ಗೌಡ ಅವರು ‘ಕತ್ತಿ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕಿ ಪದ್ಮಾವತಿ ಜಯರಾಮ್ ಮಾತನಾಡಿ, ಇದು ಕುಟುಂಬದ ಜೊತೆ ಕುಳಿತು ನೋಡುವಂತಹ ಸಿನಿಮಾ ಎಂದು ಹೇಳಿದರು.
‘ಬಲರಾಮನ ದಿನಗಳು’ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿರುವ ‘ಶುರು ಶುರು..’ ಹಾಡಿಗೆ ಸಂಚಿತ್ ಹೆಗ್ಡೆ ಮತ್ತು ಪುಣ್ಯ ಧ್ವನಿ ನೀಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಟಿ-ಸಿರೀಸ್ ಸಂಸ್ಥೆ 3 ಕೋಟಿ 75 ಲಕ್ಷ ರೂಪಾಯಿಗೆ ಖರೀದಿಸಿದ್ದು, ಇದು ನಿರ್ಮಾಪಕರಿಗೆ ಮತ್ತೊಂದು ಸಿನಿಮಾ ನಿರ್ಮಾಣ ಮಾಡುವಷ್ಟು ದೊಡ್ಡ ಮೊತ್ತ ಎಂದು ಶ್ರೇಯಸ್ ತಿಳಿಸಿದ್ದಾರೆ.
ಇದು ‘ಆ ದಿನಗಳು’ ಸಿನಿಮಾದ ಮುಂದುವರಿದ ಭಾಗವಲ್ಲ ಎಂದು ನಿರ್ದೇಶಕ ಕೆ.ಎಂ. ಚೈತನ್ಯ ಸ್ಪಷ್ಟಪಡಿಸಿದ್ದು, ಸಂಪೂರ್ಣ ಹೊಸ ಕಥಾಹಂದರ ಹೊಂದಿರುವ ಚಿತ್ರ ಎಂದು ತಿಳಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಆಡಿಯೋ ಹಕ್ಕುಗಳ ಭಾರೀ ಮೊತ್ತದ ವ್ಯವಹಾರ ‘ಬಲರಾಮನ ದಿನಗಳು’ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.



