ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಶಿಕ್ಷಣ ಸಂಸ್ಥೆ ಸ್ಥಾಪನೆಯಾದ 1965 ರಿಂದ 2024ರವರೆಗೂ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಮಾಡಿದ ಎಲ್ಲ ದಾಖಲೆಯನ್ನು ಮುರಿದು ಶೇ 98.24 ರಷ್ಟು ಅಂಕ ಗಳಿಸಿದ
ಇಲ್ಲಿಯ ಜನತಾ ವಿದ್ಯಾವರ್ಧಕ ಸಂಸ್ಥೆಯ ಬಿ.ಎಚ್. ಪಾಟೀಲ ಪ್ರೌಢಶಾಲೆಯ ವಿದ್ಯಾರ್ಥಿ, ದಿನಪತ್ರಿಕೆ ಹಂಚುವ ಬಡ ರೈತನ ಪುತ್ರ ಪ್ರಕಾಶ ಬಸವರಾಜ ಪಾಪನಾಶಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಯ ಇದುವರೆಗಿನ ದಾಖಲೆಗಳನ್ನು ಮುರಿದಿದ್ದಾನೆ.
625ಕ್ಕೆ 614 ಅಂಕ ಗಳಿಸಿದ ವಿದ್ಯಾರ್ಥಿಯು ಗದಗ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ. ಈ ಹಿಂದೆ 2015ರಲ್ಲಿ ಮಳಗಿ ಎಂಬ ವಿದ್ಯಾರ್ಥಿ ಶೇ. 92 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದ. ತನ್ನ ತಂದೆಯ ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಾ ಬೆಳಗ್ಗೆ 6ಕ್ಕೆ ಇಲ್ಲಿಯ ಪತ್ರಿಕೆ ಏಜೆನ್ಸಿಯವರಿಂದ ಪತ್ರಿಕೆ ಪಡೆದು ಗ್ರಾಮದ ಮನೆ ಮನೆಗೆ ಪತ್ರಿಕೆ ಹಂಚಿ ಶ್ರದ್ಧೆಯಿಂದ ಶಾಲೆಗೆ ಹೋಗುತ್ತಿದ್ದ. ವಿಶೇಷವಾಗಿ, ರಾತ್ರಿಯ ಸಮಯದಲ್ಲಿ ತನ್ನ ಅಚ್ಚುಮೆಚ್ಚಿನ ಗಣಿತ ಶಿಕ್ಷಕ ಬಿ.ಎಸ್. ಕಣವಿಯವರ ಮನೆಯಲ್ಲಿ ವಾಸವಾಗಿ ಅವರ ಮಾರ್ಗದರ್ಶನದಲ್ಲಿ ಪ್ರಕಾಶ ಈಗ ಶೇ. 98 ಅಂಕ ಗಳಿಸಿ ದಾಖಲೆ ಮಾಡಿದ್ದು ತಂದೆ ಬಸವರಾಜ ಹಾಗೂ ಗ್ರಾಮದ ಶಿಕ್ಷಣ ಅಭಿಮಾನಿಗಳಿಗೆ ಸಂತಸ ತಂದಿದೆ.
ಕನ್ನಡ, ಗಣಿತ, ಹಿಂದಿ ವಿಷಯದಲ್ಲಿ ಶೇ. 100 ಅಂಕ. ಇಂಗ್ಲೀಷ್ 99 ಅಂಕ, ವಿಜ್ಞಾನ 93, ಸಾಮಾಜಿಕ ವಿಜ್ಞಾನ 97 ಅಂಕ ಪಡೆದಿದ್ದಾನೆ ಎಂದು ಶಾಲೆಯ ಹಿರಿಯ ಶಿಕ್ಷಕ ಎ.ಎನ್. ಪೂಜಾರ ತಿಳಿಸಿದ್ದಾರೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಜನತಾ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸರ್ವ ಸದಸ್ಯರು ಶಾಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಬಿ.ಎಚ್. ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಎಸ್.ಎಸ್.ಎಲ್.ಸಿ ಫಲಿತಾಂಶವು ಶೇ. 59.09 ಆಗಿದೆ. ಇಬ್ಬರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 5 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಪ್ರಕಾಶ ಪಾಪನಾಶಿ ಶೇ. 98.24 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಲಕ್ಷ್ಮಣ ಒಂಟಿ ಶೇ. 92.80 ದ್ವಿತೀಯ ಹಾಗೂ ಶಿವರಾಜ ಹೊಟ್ಟಿ ಶೇ. 78.08 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ