ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ರೀಲ್ಸ್ ಮಾಡಲು ಹೋಗಿ ರಾಜಸ್ಥಾನದ ಭಿಲ್ವಾರಾದ ಜಲಪಾತದಲ್ಲಿ ಯುವಕನೊಬ್ಬ 150 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾನೆ.
ನದಿಯ ಬಲವಾದ ಪ್ರವಾಹಗಳ ನಡುವೆ ಯುವಕರು ಹಗ್ಗವನ್ನು ಗಟ್ಟಿಯಾಗಿ ಹಿಡಿದು ಅದರ ತುದಿಯಲ್ಲಿ ಹರಿಯುವ ಪ್ರವಾಹದಲ್ಲಿ ಸಿಲುಕಿದ್ದ ತಮ್ಮ ಸ್ನೇಹಿತನನ್ನು ಎಳೆಯುತ್ತಿದ್ದಾರೆ. ಆದರೂ, ಆತ ನೀರಿನ ರಭಸಕ್ಕೆ ಹಿಡಿತ ಕಳೆದುಕೊಂಡು ಅವನ ಸ್ನೇಹಿತರ ಕಣ್ಮುಂದೆಯೇ ಬಲವಾದ ಪ್ರವಾಹಗಳ ಜೊತೆಗೆ ಕೊಚ್ಚಿಹೋಗಿದ್ದಾನೆ. ಈ ಘಟನೆಯಲ್ಲಿ ಯುವಕ ಮೃತಪಟ್ಟಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಮೃತ ಯುವಕ ಭಿಲ್ವಾರಾ ಜಿಲ್ಲೆಯ ಭವಾನಿ ನಗರದ ನಿವಾಸಿ ಕನ್ಹಯ್ಯಾಲಾಲ್ ಬೈರ್ವಾ (26) ಎಂಬುದಾಗಿ ತಿಳಿದುಬಂದಿದೆ. ಈತ ಸೋಮವಾರ ವಿಶ್ವಪ್ರಸಿದ್ಧ ಮೇನಾಲ್ ಜಲಪಾತಕ್ಕೆ ತನ್ನ ಸ್ನೇಹಿತರ ಜೊತೆಗೆ ಪಿಕ್‍ನಿಕ್‌ಗೆ ಬಂದಿದ್ದಾನೆ. ಎಲ್ಲರೂ ಬಂಡೆಗಳ ಮೇಲೆ ಕುಳಿತು ಸ್ನಾನ ಮಾಡಿದ್ದಾರೆ. ಆ ವೇಳೆ ಅವರು ಸೆಲ್ಫಿ ತೆಗೆದುಕೊಳ್ಳುವುದರ ಜೊತೆಗೆ ರೀಲ್ ಮಾಡಲು ಮುಂದಾಗಿದ್ದಾರೆ. ಆ ವೇಳೆ ಕನ್ಹಯ್ಯಾಲಾಲ್ ಕಾಲು ಜಾರಿ ಬಲವಾದ ಪ್ರವಾಹಕ್ಕೆ ಸಿಲುಕಿದ್ದಾನೆ. ಆಗ ಆತ ಜಲಪಾತಕ್ಕೆ ಜೋಡಿಸಲಾದ ಸುರಕ್ಷತಾ ಸರಪಳಿಯನ್ನು ಹಿಡಿದಿದ್ದಾನೆ. ಹಾಗಾಗಿ ಅವರ ಸ್ನೇಹಿತರು ಮತ್ತು ಸ್ಥಳೀಯರು ಅವನನ್ನು ರಕ್ಷಿಸಲು ಪ್ರಯತ್ನಿಸಿದರು.
ಅಂತಿಮವಾಗಿ ಅವನ ಕೈ ಸರಪಳಿಯಿಂದ ಜಾರಿ ಜಲಪಾತದಿಂದ 150 ಅಡಿ ಕೆಳಗೆ ಬಿದ್ದನು. ಮಾಹಿತಿ ಬಂದ ಕೂಡಲೇ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ತಂಡ ಸ್ಥಳಕ್ಕೆ ಬಂದಿದ್ದಾರೆ. ಸ್ಥಳೀಯರು ಹಾಗೂ ರಕ್ಷಣಾ ತಂಡ ಕನ್ಹಯ್ಯಾಲಾಲ್ ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.