ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ರೀಲ್ಸ್ ಮೊರೆ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೇ ಲೈಕ್, ಕಾಮೆಂಟ್ ಗೋಸ್ಕರ ಕೆಲವು ಯುವಕರ ಹುಚ್ಚಾಟಗಳು ಮಿತಿ ಮೀರುತ್ತಿದೆ.
ಅದರಂತೆ ರಸ್ತೆ ಮಧ್ಯೆ ಛೇರ್ ಹಾಕಿಕೊಂಡು ಟೀ ಕುಡಿಯುತ್ತಾ ರೀಲ್ಸ್ ಮಾಡಿ ಹುಚ್ಚಾಟ ಮಾಡಿದವನಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕಳೆದ ಏಪ್ರಿಲ್ 12 ರಂದು ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿ ರಸ್ತೆಯಲ್ಲಿ ರೀಲ್ಸ್ ಮಾಡುತ್ತಾ ಈ ಯುವಕ ಕಿರಿಕ್ ಮಾಡಿದ್ದ. ನಂತರ ಆ ರೀಲ್ಸ್ ಅನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆ simbu_str_123 ನಲ್ಲಿ ಅಪ್ಲೋಡ್ ಮಾಡಿದ್ದ.
ಸಿಟಿ ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್ ಪುಂಡನ ರೀಲ್ಸ್ ಗಮನಿಸಿತ್ತು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯುವಕರಿಗೆ ತಪ್ಪು ಸಂದೇಶ ನೀಡಿದ ಅಡಿ ಎಸ್.ಜೆ.ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಪುಂಡನನ್ನು ಬಂಧಿಸಿ, ಬಳಿಕ ಬುದ್ದಿ ಹೇಳಿ ಬಿಟ್ಟು ಕಳುಹಿಸಿದ್ದಾರೆ.