ವಿಜಯಸಾಕ್ಷಿ ಸುದ್ದಿ, ಗದಗ : ಕಳೆದ ಬಾರಿ ಗದಗ ಜಿಲ್ಲೆಯ ಪಿಯುಸಿ ಫಲಿತಾಂಶ ಕ್ಷೀಣಿಸಿದ್ದರಿಂದ ಇಲ್ಲಿನ ಉಪನ್ಯಾಸಕರು ಆತಂಕಗೊಳ್ಳುವ ಅಗತ್ಯವಿಲ್ಲ. ಈ ಬಾರಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಗದಗ ಜಿಲ್ಲೆಯ ಫಲಿತಾಂಶವನ್ನು ಒಂದಂಕಿಗೆ ತರುವ ನಿಟ್ಟಿನಲ್ಲಿ ಉಪನ್ಯಾಸಕರು ಗಮನ ಹರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಿದ್ಧಲಿಂಗ ಬಂಡು ಮಸನಾಯ್ಕ ನುಡಿದರು.
ಅವರು ಇತ್ತೀಚೆಗೆ ನಗರದ ಮನೋರಮಾ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ಹಾಗೂ ಗದಗ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಸಂಯುಕ್ತಾಶ್ರದಲ್ಲಿ ಜರುಗಿದ ಕನ್ನಡ ಭಾಷಾ ವಿಷಯದ ಉಪನ್ಯಾಸಕರ ಒಂದು ದಿನದ ಪುನಶ್ಚೇತನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷಾ ಉಪನ್ಯಾಸಕರಿಗಾಗಿ ನಡೆದಿರುವ ಈ ಪುನಶ್ಚೇತನ ತರಬೇತಿ ಶಿಬಿರ ಜ್ಞಾನಿಗಳ-ವಾಗ್ಮಿಗಳ ಸಮಾಗಮವಾಗಿದೆ. ಉಪನ್ಯಾಸಕರು ಜೀವನದಲ್ಲಿ ಸದಾ ವಿದ್ಯಾರ್ಥಿಯಾಗಿರಬೇಕಿದ್ದು, ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಬೋಧನಾ ಕೌಶಲವನ್ನು ನವೀಕರಣಗೊಳಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆ ವಿದ್ಯಾರ್ಥಿಗಳ ಮನಗೆಲ್ಲುವ ಸವಾಲು ಉಪನ್ಯಾಸಕರ ಎದುರಿಗೆ ಇದ್ದು, ಉಪನ್ಯಾಸಕರ ವ್ಯಕ್ತಿತ್ವ ಸಹ ಮಾದರಿಯಾಗಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ.ಪೂ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳಾದ ಡಾ.ತಿಮ್ಮರಾಜು ಹಾಗೂ ಎಸ್.ಎಚ್. ಸತ್ಯನಾರಾಯಣ ಅವರು ನಾಡಿನ ದಕ್ಷಿಣ ಭಾಗದಿಂದ ಕೇವಲ ನಮ್ಮ ಕರೆಗೆ ಓಗೊಟ್ಟು ಪುನಶ್ಚೇತನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಅನುತ್ತೀರ್ಣನಾಗದಂತೆ ನಾವು ನೋಡಿಕೊಳ್ಳಬೇಕಿದ್ದು, ಈ ಬಾರಿಯ ಗದಗ ಜಿಲ್ಲೆಯ ಫಲಿತಾಂಶಕ್ಕೆ ಕನ್ನಡ ಉಪನ್ಯಾಸಕರು ಅವಿರತ ಶ್ರಮವಹಿಸಿ ಒಳ್ಳೆಯ ಕೊಡುಗೆ ನೀಡೋಣ ಎಂದರು.
ಚಾಮರಾಜನಗರದ ಆಲೂರಿನ ಸರ್ಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಡಾ.ತಿಮ್ಮರಾಜು, ಚಿಕ್ಕಮಗಳೂರು ಬಸವನಹಳ್ಳಿಯ ಕನ್ನಡ ಉಪನ್ಯಾಸಕರಾದ ಡಾ. ಎಚ್.ಎಸ್. ಸತ್ಯನಾರಾಯಣ ಹಾಗೂ ಡಾ.ಸಿದ್ಧರಾಮ ಖಾನಾಪುರ ಕನ್ನಡ ಉಪನ್ಯಾಸಕರಿಗಾಗಿ ಪುನಶ್ಚೇತನ ತರಬೇತಿ ನೀಡಿದರು.
ಕಳೆದ ಸಾಲಿನ ಪಿಯು ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ನೂರಕ್ಕೆ ನೂರು ಫಲಿತಾಂಶ ನೀಡಿದ ಕಾಲೇಜುಗಳ ಕನ್ನಡ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಕನ್ನಡ ಭಾಷೆಯಲ್ಲಿ ಉತ್ತೀರ್ಣವಾಗಲು ನೆರವಾಗುವಂಥ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಮನೋರಮಾ ಕಾಲೇಜಿನ ಚೇರಮನ್ನರಾದ ನರಸಿಂಹ ಕುಡ್ತರಕರ, ಪ.ಪೂ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಗೌರವಾಧ್ಯಕ್ಷರಾದ ಸತೀಶ್ ಪಾಶಿ ವೇದಿಕೆ ಮೇಲಿದ್ದರು. ಎಫ್.ಎನ್. ಹುಡೇದ ನಿರೂಪಿಸಿದರೆ, ಎಸ್.ಎಚ್. ಮಲ್ಲಾಪೂರ ವಂದಿಸಿದರು.
ಶಿಬಿರದ ಆಶಯದ ಕುರಿತು ಜಿಲ್ಲಾ ಪ.ಪೂ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಎಂ.ಸಿ. ಕಟ್ಟಿಮನಿ ಮಾತನಾಡಿ, ಗದಗ ಜಿಲ್ಲೆಯ ಪಿಯು ಫಲಿತಾಂಶ ಸುಧಾರಣೆಗೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸುದೀರ್ಘ ಸಭೆ ನಡೆದಿದ್ದು, ಉಪನ್ಯಾಸಕರ ಸಲಹೆ-ಅಶೋತ್ತರಗಳ ವರದಿ ನೀಡಲಾಗಿದೆ. ಕನ್ನಡ ಭಾಷಾ ಉಪನ್ಯಾಸಕರು ಸೇರಿದಂತೆ ಗದುಗಿನ ಪಿಯು ಉಪನ್ಯಾಸಕರ ವೃಂದ ಸತತ ಪರಿಶ್ರಮದಿಂದ ಫಲಿತಾಂಶವನ್ನು ಉತ್ತಮಗೊಳಿಸೋಣ ಎಂದರು.



