ರಜಾ ದಿನಗಳಲ್ಲೂ ನೋಂದಣಿಗೆ ಅವಕಾಶ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯಗಳನ್ನು ಸಾರ್ವಜನಿಕ ಮತ್ತು ಜನಸ್ನೇಹಿಗೊಳಿಸಲು ರಾಜ್ಯ ಸರ್ಕಾರವು ಪ್ರತಿ ತಿಂಗಳ ಎರಡನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳಂದು ಜಿಲ್ಲೆಯ ನೋಂದಣಿ ಕಚೇರಿಗಳ ಪೈಕಿ ಒಂದರಲ್ಲಿ ನೋಂದಣಿ ಕಾರ್ಯ ನಿರ್ವಹಿಸಲು ಆದೇಶಿಸಿದೆ.

Advertisement

ಅದರಂತೆ ಧಾರವಾಡ ಜಿಲ್ಲೆಯಲ್ಲಿ ಧಾರವಾಡ, ಹುಬ್ಬಳ್ಳಿ ಉತ್ತರ, ಹುಬ್ಬಳ್ಳಿ ದಕ್ಷಿಣ, ಕಲಘಟಗಿ, ನವಲಗುಂದ, ಅಣ್ಣಿಗೇರಿ ಮತ್ತು ಕುಂದಗೋಳ ಪಟ್ಟಣ ಸೇರಿದಂತೆ ಒಟ್ಟು 7 ಉಪನೋಂದಣಿ ಕಛೇರಿಗಳಿವೆ.

ಈಗಾಗಲೇ ಜಿಲ್ಲೆಯ ಯಾವುದೇ ಕಛೇರಿಯಲ್ಲಿ ಆದರೂ ನೋಂದಣಿ ಮಾಡಿಸಿಕೊಳ್ಳುವ ಯೋಜನೆ ಜಾರಿಯಲ್ಲಿದೆ. ಅದರಂತೆ ಸರಕಾರವು ಈಗ ತಿಂಗಳ 2ನೇ ಮತ್ತು 4ನೇ ಶನಿವಾರ ಹಾಗೂ ಎಲ್ಲಾ ಭಾನುವಾರಗಳಂದು ಜಿಲ್ಲೆಯ ಒಂದು ಉಪನೋಂದಣಿ ಕಛೇರಿ ಕಾರ್ಯನಿರ್ವಹಿಸಲು ನಿರ್ದೇಶಿಸಿದ್ದು, ಈಗಿರುವ ಧಾರವಾಡ ಜಿಲ್ಲೆಯ 7 ಉಪನೋಂದಣಿ ಕಛೇರಿಗಳ ಪೈಕಿ ಸರದಿ ಪ್ರಕಾರ ಜಿಲ್ಲೆಯ ಒಂದು ಉಪನೋಂದಣಿ ಕಛೇರಿಯಲ್ಲಿ ಆಸ್ತಿ, ವಿವಾಹ ನೋಂದಣಿ ಸೇರಿದಂತೆ ನೋಂದಣಿ ಕಾರ್ಯ ನಡೆಯಲಿದೆ.

ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here