ಸಂಬಂಧಗಳು ಪುಸ್ತಕ ಇದ್ದಂತೆ: ಶ್ರೀ ರಂಭಾಪುರಿ ಜಗದ್ಗುರುಗಳು

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ: ಮನುಷ್ಯನಿಗೆ ಒಳ್ಳೆಯ ಗುಣ, ಒಳ್ಳೆಯ ನಡತೆ ಮತ್ತು ಒಳ್ಳೆಯ ಸಂಸ್ಕಾರ ಇವುಗಳೇ ನಿಜವಾದ ಆಸ್ತಿಯೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಮಂಗಳವಾರ ತಾಲೂಕಿನ ಗುತ್ತಲ ಪಟ್ಟಣದ ಶ್ರೀ ಹೇಮಗಿರಿ ನೂತನ ಶಿಲಾಮಂದಿರ ಉದ್ಘಾಟನಾ ಪೂರ್ವ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಎಲ್ಲಿಯ ತನಕ ನಂಬಿಕೆ-ಸ್ನೇಹ-ಪ್ರೀತಿ ಎಂಬ ಬೇರುಗಳು ಗಟ್ಟಿಯಾಗಿರುತ್ತವೆಯೋ ಅಲ್ಲಿಯ ತನಕ ಸಂಬಂಧವೆಂಬ ಮರ ಅಲುಗಾಡದೇ ಗಟ್ಟಿಯಾಗಿರುತ್ತದೆ. ತಂದೆಯಿಂದ ಪಡೆದ ಗತ್ತು, ತಾಯಿಯಿಂದ ಪಡೆದ ತುತ್ತು, ಶಿಕ್ಷಕರಿಂದ ಕಲಿತ ಶಿಸ್ತು ಎಂದಿಗೂ ಮರೆಯಲಾಗದು. ಸಂಬಂಧಗಳು ಪುಸ್ತಕ ಇದ್ದಂತೆ. ಬರೆಯಲು ವರುಷಗಳೇ ಬೇಕು. ಆದರೆ ನಾಶ ಮಾಡಲು ಒಂದು ಕ್ಷಣ ಸಾಕು. ಏನು ಹೇಳುತ್ತೇವೆ ಎನ್ನುವುದಕ್ಕಿಂತಲೂ ಹೇಗೆ ಹೇಳುತ್ತೇವೆ ಎಂಬುದು ಮುಖ್ಯ.

ಜೀವನದಲ್ಲಿ ಅಲ್ಲದವರ ಸಂಗ ಮಾಡಿ ಅಡವಿ ಪಾಲಾಗುವುದಕ್ಕಿಂತ ಬಲ್ಲವರ ಸಂಗ ಮಾಡಿ ಬೆಲ್ಲದಂತೆ ಬಾಳುವುದು ಶ್ರೇಯಸ್ಕರವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಬಡವನಿಗೆ ನೆಮ್ಮದಿ ಇರುತ್ತದೆ. ಆದರೆ ಹಣ ಇರುವುದಿಲ್ಲ. ಶ್ರೀಮಂತನಿಗೆ ಹಣ ಇರುತ್ತದೆ. ಆದರೆ ನೆಮ್ಮದಿ ಇರುವುದಿಲ್ಲ. ಹಣ, ನೆಮ್ಮದಿ ಇದ್ದವರಿಗೆ ಒಳ್ಳೆಯ ಗುಣ ಇರುವುದಿಲ್ಲ. ಹಣ, ಗುಣ, ನೆಮ್ಮದಿ ಇದ್ದವರು ಭೂಮಿಯ ಮೇಲೆ ಬಹಳ ವರುಷ ಇರುವುದಿಲ್ಲ ಎಂಬ ಸತ್ಯ ಅರಿಯಬೇಕಾಗಿದೆ ಎಂದರು.

ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಮಾರಂಭವನ್ನು ಉದ್ಘಾಟಿಸಿ ಮನುಷ್ಯ ಧರ್ಮ ಮಾರ್ಗದಲ್ಲಿ ಮುನ್ನಡೆದಾಗ ಯಶಸ್ಸು ದೊರೆಯುತ್ತದೆ ಎಂದರು.

ಹAಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿ, ಶುದ್ಧವಾದ ಬುದ್ಧಿ ಸಂಪತ್ತಿನ ಆಗರ. ಬದುಕಿ ಬಾಳುವ ಜನಾಂಗಕ್ಕೆ ಧರ್ಮದ ಅರಿವು ಮತ್ತು ಆಚರಣೆ ಬೇಕು. ಅರಿವಿನ ಆಚಾರ ಬದುಕಿನ ಉನ್ನತಿಗೆ ಅಡಿಪಾಯ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ವಿಚಾರ ಧಾರೆ ಸಕಲರ ಬಾಳಿನಲ್ಲಿ ಬೆಳಕು ತೋರುತ್ತವೆ ಎಂದರು.

ಅಂಗೂರ ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು, ಗುತ್ತಲ-ಅಗಡಿ ಕಲ್ಮಠದ ಗುರುಸಿದ್ಧಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ನೇತೃತ್ವ ವಹಿಸಿದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾನವನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ, ಜೀವನದ ಉಜ್ವಲ ಭವಿಷ್ಯಕ್ಕೆ ಗುರು ಮಾರ್ಗದರ್ಶನ ಅವಶ್ಯಕವಾಗಿದೆ. ಕಾಲ ಕಾಲಕ್ಕೆ ಮಹಾತ್ಮರು ಕೊಟ್ಟ ಅಮೂಲ್ಯ ಸಂದೇಶದ ನುಡಿಗಳು ಎಲ್ಲರಿಗೂ ದಾರಿದೀಪ. ಗುತ್ತಲದ ನೂತನ ಹೇಮಗಿರಿ ಶಿಲಾಮಠ ಉದ್ಘಾಟನೆಗೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.


Spread the love

LEAVE A REPLY

Please enter your comment!
Please enter your name here