ಬೆಂಗಳೂರು: ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ವಯಸ್ಸು ಕಡ್ಡಾಯ ಎಂಬ ನಿಯಮದಲ್ಲಿ ರಾಜ್ಯ ಸರ್ಕಾರ ಈ ವರ್ಷವೂ 60 ದಿನಗಳ ವಿನಾಯಿತಿ ನೀಡಿದೆ.
ವಿಧಾನಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 2026-27ನೇ ಶೈಕ್ಷಣಿಕ ವರ್ಷದ ದಾಖಲಾತಿಗೆ ಈ ಸಡಿಲಿಕೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ನಿರ್ಧಾರದಂತೆ, 5 ವರ್ಷ 10 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ವಯಸ್ಸು ಹೊಂದಿರುವ ಮಕ್ಕಳಿಗೂ ಒಂದನೇ ತರಗತಿಗೆ ದಾಖಲಾಗಲು ಅವಕಾಶ ಸಿಗಲಿದೆ. ಈ ವಿನಾಯಿತಿ ಎಲ್ಕೆಜಿ, ಯುಕೆಜಿ ಮತ್ತು ಒಂದನೇ ತರಗತಿಗೂ ಅನ್ವಯವಾಗುತ್ತದೆ.
ವಯೋಮಿತಿ ಸಡಿಲಿಕೆಗೆ ಸಂಬಂಧಿಸಿ ಪೋಷಕರು ಹಲವು ಬಾರಿ ಆಗ್ರಹ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಈ ಮೂಲಕ ಪೋಷಕರಿಗೆ ಸ್ವಲ್ಪ ಮಟ್ಟಿನ ನಿರಾಳತೆ ದೊರೆತಿದೆ.
ಪ್ರತಿ ವರ್ಷ ಈ ಸಮಸ್ಯೆ ಮರುಕಳಿಸುತ್ತಿರುವ ಹಿನ್ನೆಲೆ ಶಾಶ್ವತ ಪರಿಹಾರಕ್ಕಾಗಿ ಹೊಸ ಕಾನೂನು ತರಲು ಸರ್ಕಾರ ನಿರ್ಧರಿಸಿದೆ. ಎಲ್ಕೆಜಿ ಮತ್ತು ಯುಕೆಜಿ ದಾಖಲಾತಿಗೆ ವಯೋಮಿತಿ ನಿಗದಿಪಡಿಸಲು ನಿಯಮಾವಳಿ ತರಲು ಉದ್ದೇಶಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.



