ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಗೆ ಕ್ಯೂಆರ್ ಕೋಡ್ ಮೂಲಕ ಅಂಗೈಯಲ್ಲಿ ಉದ್ಯೋಗ ಖಾತ್ರಿ ಮಾಹಿತಿ ನೀಡುವ ಆಧುನಿಕತೆಯ ಟಚ್ ನೀಡಿ ಗ್ರಾಮೀಣ ಜನರಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹೇಳಿದರು.
ಲಕ್ಷ್ಮೇಶ್ವರ ತಾ.ಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ `ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ’ ಅಭಿಯಾನದ ಕ್ಯೂಆರ್ ಕೋಡ್ ಒಳಗೊಂಡ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಊರಿನಲ್ಲಿಯೇ ವರ್ಷದಲ್ಲಿ 100 ದಿನ ಕೆಲಸ ನೀಡಿ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಫಲಾನುಭವಿಗಳ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳಿಗೂ ಒತ್ತು ನೀಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಕ್ಯೂಆರ್ ಕೋಡ್ ಒಳಗೊಂಡ ಮಾಹಿತಿ ಪತ್ರವನ್ನು ಪ್ರಚಾರಕ್ಕಾಗಿ ವಿತರಿಸಿದೆ. ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ಜನರು ತಮ್ಮ ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ವೈಯಕ್ತಿಕ ಕಾಮಗಾರಿಗೆ ಬೇಡಿಕೆ ಸಲ್ಲಿಸಬಹುದಾಗಿದೆ ಎಂದರು.
ಈ ಬಗ್ಗೆ ಗ್ರಾಮ ಪಂಚಾಯತಿಯ ಜಿಕೆಎಂ ಮತ್ತು ಬಿಎಫ್‌ಟಿ ಸಹಿತಿ ಎಲ್ಲ ಹಂತದ ಗ್ರಾ.ಪಂ ಸಿಬ್ಬಂದಿಗಳು ಗ್ರಾ.ಪಂ ಕಚೇರಿ ಹಾಗೂ ಜನರು ಹೆಚ್ಚಾಗಿ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಲಗತ್ತಿಸಿ ಹೆಚ್ಚು ಹೆಚ್ಚು ಜನರು ಬೇಡಿಕೆ ಸಲ್ಲಿಸುವಂತೆ ನೋಡಿಕೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಪಿಡಿಒ ಬಿ.ಬಿ. ತಳವಾರ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯು ಬಡವರ ಕಲ್ಯಾಣಕ್ಕಾಗಿ ಇರುವ ಮಹತ್ವದ ಯೋಜನೆಯಾಗಿದೆ. ಗ್ರಾಮೀಣ ಭಾಗದವರು ಆರ್ಥಿಕವಾಗಿ ಮುಂದೆ ಬರಲು ಪೂರಕವಾಗಿದೆ ಎಂದರು.
ತಾಲೂಕು ಪಂಚಾಯಿತಿ ಅಧಿಕಾರಿಗಳಾದ ಶ್ರೀಕಾಂತ ಬಾಲೇಹೊಸೂರ, ಸುರೇಶ ಹಡಪದ, ಚಂದ್ರಶೇಖರ ಹಳ್ಳಿ, ಅರುಣ ತಂಬ್ರಳ್ಳಿ, ತಾ.ಪಂ ಸಿಬ್ಬಂದಿಗಳಾದ ಎಂ.ಬಿ. ಪಾಟೀಲ, ಮಧುಮತಿ ಪಾಟೀಲ, ಗಣೇಶ ಲಮಾಣಿ, ಗಣೇಶ ಸುಲಾಖೆ, ಸೋಮಶೇಖರ ತಳವಾರ ಇತರರು ಇದ್ದರು.
ರೈತರು ಸಾಮಾನ್ಯ ಬೆಳೆಗಳನ್ನು ಬೆಳೆಯುವ ಬದಲು ತೋಟಗಾರಿಕೆ ಬೆಳೆಗಳಾದ ಹೂ ಮತ್ತು ಹಣ್ಣು ಬೆಳೆಗೆ ಆದ್ಯತೆ ನೀಡಬೇಕು. ಇದರಿಂದಲೂ ರೈತರು ಉತ್ತಮ ಆದಾಯ ಪಡೆಯಬಹುದಾಗಿದೆ.
– ಕೃಷ್ಣಪ್ಪ ಧರ್ಮರ.
ಕಾರ್ಯನಿರ್ವಾಹಕ ಅಧಿಕಾರಿ.