ವಿಜಯಸಾಕ್ಷಿ ಸುದ್ದಿ, ಗದಗ: ಮಾಜಿ ಶಾಸಕ ಡಿ.ಆರ್. ಪಾಟೀಲರು ಸಂತ ರಾಜಕಾರಣಿ ಎಂದೇ ಖ್ಯಾತರಾದವರು. ಅವರ ಕುರಿತಾದ ಅಭಿನಂದನಾ ಗ್ರಂಥವು ಇದೇ ಡಿ. 4ರಂದು ಬೆಳಗ್ಗೆ 10.30ಕ್ಕೆ ಶ್ರೀಮಠದ ಆವರಣದ ಶಿವಾನುಭವ ಮಂಟಪದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ್ ಹೇಳಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪಟ ಗಾಂಧಿವಾದಿಗಳಾಗಿರುವ ಡಿ.ಆರ್. ಪಾಟೀಲರ ಅಭಿನಂದನಾ ಗ್ರಂಥವನ್ನು ಗಾಂಧಿ ಭವನದ ಅಧ್ಯಕ್ಷ ವೂಡೆ ಪಿ.ಕೃಷ್ಣಾ ಅವರು ಉದ್ಘಾಟಿಸಲಿದ್ದಾರೆ. ಸಾನ್ನಿಧ್ಯವನ್ನು ತೋಂಟದ ಸಿದ್ಧರಾಮ ಸ್ವಾಮೀಜಿ, ರಾಮಕೃಷ್ಣ ಆಶ್ರಮಮದ ನಿರ್ಭಯಾನಂದ ಸ್ವಾಮೀಜಿ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸಚಿವ ಎಚ್.ಕೆ. ಪಾಟೀಲ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಜಿ.ಎಸ್. ಪಾಟೀಲ, ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಸಲೀಂ ಅಹ್ಮದ್, ವೇಂಕಟರಾವ್ ಘೋರ್ಪಡೆ, ಮಾಜಿ ಸಚಿವ ಎಸ್.ಎಸ್. ಪಾಟೀಲ ಮುಂತಾದವತು ಆಗಮಿಸಲಿದ್ದಾರೆ ಎಂದರು.
ಅಭಿನಂದನಾ ಗ್ರಂಥದ ಸಂಪಾದಕ ಜೆ.ಕೆ. ಜಮಾದಾರ ಮಾತನಾಡಿ, ಡಿ.ಆರ್. ಪಾಟೀಲ ಕೇವಲ ಒಬ್ಬ ಮಾಜಿ ಶಾಸಕರು ಮಾತ್ರವಲ್ಲದೇ, ಗ್ರಾಮೀಣಾಭಿವೃದ್ಧಿಯ ಹರಿಕಾರರಾಗಿ, ಜಿ.ಪಂ ಸದಸ್ಯರಾಗಿ, ಎಪಿಎಂಸಿ ಸದಸ್ಯರಾಗಿ ಮಾಡಿದ ಸಾಧನೆ, ಅವರ ಬದುಕು, ಚಿಂತನೆಯನ್ನು ಅಭಿನಂದನಾ ಗ್ರಂಥದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರೊ. ಕೆ.ಎಚ್. ಬೇಲೂರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಆರ್.ಬಿ. ಬೆನಕೊಪ್ಪ, ನಿವೃತ್ತ ಡಿಡಿಪಿಐ ನಾಗರಹಳ್ಳಿ, ಗಂಗಾಧರ ಹಿರೇಮಠ, ಕೊಟ್ರೇಶ ಮೆಣಸಿನಕಾಯಿ, ಪ್ರವೀಣ ಇತರರು ಉಪಸ್ಥಿತರಿದ್ದರು.



