ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವಿವಿಧ ಸ್ಥರ ಮತ್ತು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ 6 ತಿಂಗಳಿನಿಂದ ಬಾಕಿ ಇರುವ ವೇತನವನ್ನು ತುರ್ತಾಗಿ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸೋಮವಾರ ತಾ.ಪಂ ಕಚೇರಿಯ ಆವರಣದಲ್ಲಿ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಕಪ್ಪು ಪಟ್ಟಿ ಕಟ್ಟಿಕೊಂಡು ಶಾಂತಿಯುತ ಅಸಹಕಾರ ಪ್ರತಿಭಟನೆ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರರಿಗೆ ನೈತಿಕ ಬೆಂಬಲ ನೀಡಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಶಿವಕುಮಾರ ವಾಲಿ ಮತ್ತು ಲೆಕ್ಕ ಸಹಾಯಕ ಶ್ರೀಕಾಂತ ಬಾಲೆಹೊಸೂರ, ಸಾವಿರಾರು ಯೋಜನಾ ಫಲಾನುಭವಿಗಳ ಜೀವನೋಪಾಯಕ್ಕಾಗಿ ಆಡಳಿತಾತ್ಮಕ ದಕ್ಷತೆಯನ್ನು ಕಾಪಾಡಿಕೊಳ್ಳಲು ಬಾಕಿ ಇರುವ ವೇತನ, ಸಾಮಗ್ರಿ ಮತ್ತು ಆಡಳಿತಾತ್ಮಕ ನಿಧಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿದರು.
ಟಿ.ಎ.ಇ ಫಕ್ಕೀರೇಶ ನಿಟ್ಟಾಲಿ ಮಾತನಾಡಿ, ಗ್ರಾಮಾಭಿವೃದ್ಧಿಯಲ್ಲಿ ನರೇಗಾ ಪಾತ್ರ ದೊಡ್ಡದಿದೆ. ಅದನ್ನು ಸಮರ್ಥವಾಗಿ ನಾವೆಲ್ಲ ಮುಟ್ಟಿಸುತ್ತಿದ್ದೇವೆ. ಆದರೆ ನಮಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಪ್ರತಿ ತಿಂಗಳು ವೇತನ ದೊರೆಯುತ್ತಿಲ್ಲ. ಕಳೆದ 6 ತಿಂಗಳಿಂದ ಸಂಬಳವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಟಿ.ಸಿ ಹರೀಶ ಸೊಬರದ, ಟಿಎಂಐಎಸ್ ಮೋಹನ ಹೊಂಬಾಳ, ಮಹಾಂತೇಶ ಪಾಟೀಲ್, ಟಿಎಇ ಫಕ್ಕೀರೇಶ ನಿಟ್ಟಾಲಿ, ಮಂಜುನಾಥ ತಳವಾರ, ಶ್ರೀನಿವಾಸ ಕಲಾಲ್, ಶ್ರೀಧರ ಕುಲಕರ್ಣಿ, ಬಿ.ಕೆ. ಕರಕನಗೌಡ್ರು, ಹುಲಗಪ್ಪ, ಸತೀಶ ಅರಿಷಿನದ, ಕಾಶೀಮಸಾಬ ನದಾಫ್, ತಿರಕಪ್ಪ, ಶಿಲ್ಪಾ ಲಮಾಣಿ, ಗಂಗಮ್ಮ, ಬಾರತಿ, ಗೌರಮ್ಮ ಮಂಜುಳಾ, ಶಿವಮ್ಮ, ವಿನೋದ, ಪರಮೇಶ, ಭೀಮೇಶ ಇದ್ದರು.