ನವದೆಹಲಿ: ಕನ್ನಡಿಗರನ್ನ ಕೆರಳಿಸಿ ಕ್ಷಮೆಯಾಚಿಸಲು ನಿರಾಕರಿಸಿರುವ ನಟ ಕಮಲ್ ಹಾಸನ್ ಅವರಿಗೆ ರಿಲೀಫ್ ಸಿಕ್ಕಿದೆ. ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವರ ಚಿತ್ರತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಕರ್ನಾಟಕದಲ್ಲಿ ಸಿನಿಮಾ ರಿಲೀಸ್‌ಗೆ ಅವಕಾಶ ಕೊಟ್ಟಿದೆ. ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಪಡಿಸಬೇಡಿ. ರಿಲೀಸ್ ಆಗಬೇಕು. ನಿಮಗೆ ಇಷ್ಟ ಇಲ್ಲದಿದ್ದರೆ ಸಿನಿಮಾ ನೋಡಬೇಡಿ. ತಡೆ ನಿಡೋದು, ಬೆದರಿಕೆ ಒಡ್ಡೋದು ಸರಿಯಲ್ಲ ಎಂದು ಆದೇಶ ನೀಡಿದೆ.
ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಸಿನಿಮಾ ಕಳೆದ ಜೂನ್ 5ರಂದು ವರ್ಲ್ಡ್ ವೈಡ್ ರಿಲೀಸ್ ಆಗಿತ್ತು. ಆದರೆ ಕನ್ನಡಿಗರ ಹೋರಾಟ, ಪ್ರತಿಭಟನೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಡುಗಡೆಗೆ ಅನುಮತಿ ಸಿಕ್ಕಿರಲಿಲ್ಲ. ಒಂದು ವೇಳೆ ಕರ್ನಾಟಕದಲ್ಲಿ ಕಮಲ್ ಹಾಸನ್ ಸಿನಿಮಾ ಬಿಡುಗಡೆಯಾದ್ರೆ ಬಂದ್ ಮಾಡುವ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದರು.
ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿರುವುದರಿಂದ ಥಗ್ ಲೈಫ್ ಚಿತ್ರತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮತ್ತು ಕರ್ನಾಟಕದಲ್ಲಿ ಪೊಲೀಸ್ ರಕ್ಷಣೆಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಸಿಬಿಎಫ್ಸಿ ಸರ್ಟೀಫಿಕೇಟ್ ಬಳಿಕ ಸಿನಿಮಾ ಬಿಡುಗಡೆ ಮಾಡಬಹುದು.
ಸಿಬಿಎಫ್ಸಿ ಸರ್ಟಿಫಿಕೇಟ್ ಸಿನಿಮಾ ಪ್ರದರ್ಶಿಸುವ ಕಾನೂನನ್ನು ದೇಶದಲ್ಲಿ ಅನುಸರಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ, ಕರ್ನಾಟಕ ಸರ್ಕಾರಕ್ಕೆ ಸಿನಿಮಾ ವಿಚಾರವಾಗಿ ನೋಟಿಸ್ ಕೂಡ ನೀಡಿದೆ. ಇನ್ನು ಹೈಕೋರ್ಟ್ನಲ್ಲಿ ಸಿನಿಮಾ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್, ಟ್ರಾನ್ಸ್ಫರ್ ಮಾಡಿಕೊಂಡಿದೆ. ಹೀಗಾಗಿ ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯಬೇಕಿದ್ದ ಮುಂದಿನ ಎಲ್ಲಾ ವಿಚಾರಣೆಗಳು ಸುಪ್ರೀಂ ಕೋರ್ಟ್ನಲ್ಲಿಯೇ ನಡೆಯಲಿವೆ.