ವಿಜಯಸಾಕ್ಷಿ ಸುದ್ದಿ, ದಾವಣಗೆರೆ: ಮಾನವ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಇಹಪರದ ಶ್ರೇಯಸ್ಸಿಗೆ ಧರ್ಮವೇ ಮೂಲ. ಸುಖ-ಸಂತಸದ ಬಾಳಿಗೆ ಧರ್ಮವೊಂದೇ ಆಶಾಕಿರಣ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದ ಶ್ರೀಮದಭಿನವ ರೇಣುಕ ಮಂದಿರದಲ್ಲಿ ಜರುಗಿದ ಜನಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸುಖದ ಬದುಕಿಗೆ ಪ್ರಯತ್ನ ಬೇಕು. ಸಾಧನೆ, ಪ್ರಯತ್ನವಿಲ್ಲದೇ ಉನ್ನತಿ ಸಾಧ್ಯವಿಲ್ಲ. ಬದುಕು ವಿಕಾಸಗೊಳ್ಳಲು ಆಧ್ಯಾತ್ಮದ ಅರಿವು ಬೇಕು. ನಡೆ-ನುಡಿ, ಮನಸ್ಸುಗಳ ಸಕ್ರಿಯ ಪರಿಪಾಠವೇ ನಿಜವಾದ ಆಧ್ಯಾತ್ಮ. ಬದುಕು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. ಕೆಲವರ ಬದುಕು ಸುಖಮಯ ಇನ್ನು ಕೆಲವರ ಬದುಕು ದುಃಖಮಯವಾಗಿರುತ್ತವೆ. ಕೆಲವರ ಜೀವನ ಸಂಘರ್ಷದಿಂದ ಕೂಡಿರುತ್ತದೆ. ಕೆಲವರ ಬದುಕು ತುಂಬಾ ಚಿಂತನೆಗಳಿಂದ ಕೂಡಿರುತ್ತದೆ. ಹೃದಯವಂತಿಕೆ ಇಲ್ಲದೇ ಬುದ್ಧಿವಂತಿಕೆ ಎಷ್ಟೇ ಇದ್ದರೂ ಪ್ರಯೋಜನವಿಲ್ಲ. ಬುದ್ಧಿಗಿಂತ ಹೃದಯ ಶ್ರೀಮಂತಿಕೆ ಬಹಳ ಮುಖ್ಯ ಎಂದರು.
ಅ.ಭಾ.ವೀ.ಲಿಂ ಮಹಾಸಭಾ ರಾಷ್ಟ್ರೀಯ ಘಟಕದ ಇನ್ನೋರ್ವ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ವೀರಶೈವ-ಲಿಂಗಾಯತ ಒಂದೇ ಆಗಿದ್ದು, ಇದನ್ನು ಪ್ರತ್ಯೇಕಿಸುವ ಧ್ವನಿ ಮೂಡಬಾರದು. ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳು ಒಗ್ಗೂಡಿ ಮುಂದುವರೆಯುವ ಅವಶ್ಯಕತೆ ಇದೆ ಎಂದರು.
ಡಾ.ಜಿ.ಯಶವಂತ ಅವರಿಗೆ `ವೈದ್ಯ ಚಿಂತಾಮಣಿ’ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಅ.ಭಾ.ವೀ.ಲಿಂ ಮಹಾಸಭಾ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಎಸ್.ಎಸ್. ಗಣೇಶ್, ದಾವಣಗೆರೆಯ ಡಿ.ಡಿ. ಬಸವರಾಜಪ್ಪ, ಹೆಚ್.ಬಿ. ಮಂಜಪ್ಪ, ಡಾ. ರಾಜಶೇಖರ್ ಅಣ್ಣಿಗೇರಿ, ಗೌತಮ್ ಜೈನ್, ಸುನೀತಾ ಆರ್, ನಾಗಲಕ್ಷ್ಮೀ, ಶೃತಿ, ಎನ್.ಎಚ್. ಶಿವಗಂಗಮ್ಮ, ಖಂಡೋಜಿರಾವ್ ಜಾಧವ್, ಎಂ. ಲಕ್ಷ್ಮೀ, ನಾಗವೇಣಿ, ಶಿವಮ್ಮ ಬಸವರಾಜಪ್ಪ ಆಗಮಿಸಿ ನುಡಿ ನಮನ ಸಲ್ಲಿಸಿದರು.
ಸಮಾರಂಭದಲ್ಲಿ ಶ್ರೀ ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್, ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್ ಉಪಸ್ಥಿತರಿದ್ದರು. ನೇತೃತ್ವ ವಹಿಸಿದ ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಧರ್ಮ ಮತ್ತು ಧರ್ಮಾಚರಣೆ ಕುರಿತು ಮಾತನಾಡಿದರು. ಸಿದ್ಧರಬೆಟ್ಟದ ವೀರಭಧ್ರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು. ಜಯದೇವ ಎಸ್. ದೇವರಮನಿ ಸ್ವಾಗತಿಸಿದರು. ಹರಿಹರದ ಸೌಭಾಗ್ಯ ಹಿರೇಮಠ ನಿರೂಪಿಸಿದರು.
ಸಮಾರಂಭ ಉದ್ಘಾಟಿಸಿದ ಅ.ಭಾ.ವೀ.ಲಿಂ ಮಹಾಸಭಾ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಡಾ. ಅಥಣಿ ವೀರಣ್ಣನವರು ಮಾತನಾಡಿ, ಹಿರಿಯರ ಮೌಲ್ಯಾಧಾರಿತ ಚಿಂತನಗಳು ಬಾಳಿನ ಆಶಾಕಿರಣ. ಸ್ವಾರ್ಥರಹಿತ ಬದುಕಿಗೆ ಬೆಲೆಯಿದೆ. ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೇ ಮಾರಕವಾಗಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆಗಳು ಬದುಕಿ ಬಾಳುವ ಜೀವಾತ್ಮರಿಗೆ ಸ್ಫೂರ್ತಿಯಾಗಿವೆ ಎಂದರು.