ಒಡೆದ ಮನಸ್ಸುಗಳನ್ನು ಬೆಸೆಯುವುದೇ ಧರ್ಮ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ರಾಣೆಬೆನ್ನೂರು: ಹುಟ್ಟು-ಸಾವು ನಮ್ಮ ಕೈಯಲ್ಲಿ ಇಲ್ಲ. ಆದರೆ ಬದುಕು ನಮ್ಮ ಕೈಯಲ್ಲಿದೆ. ಮಾತು ಒಂದುಗೂಡಿಸಬೇಕೇ ಹೊರತು ಒಡೆಯಬಾರದು. ಒಡೆದು ಹೋದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಬುಧವಾರ ತಾಲೂಕಿನ ಬೇಲೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಮಂಗಲ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮಾನವ ಜೀವನ ಉತ್ಕೃಷ್ಟ ಅರಿವು, ಆಚಾರಗಳಿಂದ ಸಮೃದ್ಧಗೊಳ್ಳಬೇಕು. ಧರ್ಮ, ಸಂಪ್ರದಾಯ ಪರಂಪರೆಗಳಲ್ಲಿ ನಮ್ಮ ನಂಬಿಕೆ, ವಿಶ್ವಾಸಗಳನ್ನು ಕಳೆದುಕೊಳ್ಳಬಾರದು. ಜೀವನಾಧಾರಕ್ಕೆ ನೀರು, ಅನ್ನ, ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಹಾಗೆಯೇ ಜೀವನದ ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆ ಅಗತ್ಯವಾಗಿದೆ. ಜ್ಞಾನ ಕ್ರಿಯೆಗಳ ಸಂಗಮದ ಬದುಕು ಉತ್ಕರ್ಷ ಬದುಕಿಗೆ ಅಡಿಪಾಯವಾಗುತ್ತದೆ. ಉತ್ತಮ ಚಿಂತನೆಗಳು ನಮ್ಮ ಬದುಕಿಗೆ ಬೆಳಕು ತೋರುವುದು ಅಷ್ಟೇ ಅಲ್ಲ. ಪರರ ಬದುಕಿಗೂ ಬೆಳಕಾಗಿ ಕಾಣುತ್ತದೆ. ಮನುಷ್ಯನಿಗೆ ವ್ಯಕ್ತಿತ್ವ ಮುಖ್ಯವೇ ಹೊರತು ಆಸ್ತಿ-ಅಂತಸ್ತಲ್ಲ. ಆದರ್ಶ ಆಲೋಚನೆ ಮತ್ತು ಆಚರಣೆಗಳಲ್ಲಿ ಘನವಾದ ವ್ಯಕ್ತಿತ್ವ ಇದೆಯೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಬೋಧಿಸಿದ್ದಾರೆ ಎಂದರು.

ಸಮಾರAಭ ಉದ್ಘಾಟಿಸಿದ ದಿಂಡದಹಳ್ಳಿ ಪಶುಪತಿ ಶಿವಾಚಾರ್ಯರು ಮಾತನಾಡಿ, ಎಲ್ಲವೂ ಇದ್ದು ಶಕ್ತಿಶಾಲಿಗಳು ಎನಿಸುವುದು ದೊಡ್ಡದಲ್ಲ. ಎಲ್ಲವನ್ನು ಕಳೆದುಕೊಂಡರೂ ತೋರುವ ಧೈರ್ಯವೇ ನಿಜವಾದ ಶಕ್ತಿ. ಅಡವಿಗಳಲ್ಲಿ ರಾಮ ಅಲೆದರೂ ಕೆಡಲಿಲ್ಲ. ಅಂತಃಪುರದಲ್ಲಿ ರಾವಣ ಬೆಳೆದರೂ ಒಳ್ಳೆಯವನಾಗಲಿಲ್ಲ. ಲಿಂ.ಶಿವಾನಂದ ಶ್ರೀಗಳ ಮಾರ್ಗದರ್ಶನ ಬೇಲೂರು ಗ್ರಾಮಸ್ಥರಿಗೆ ದೊರೆತಿರುವುದರಿಂದ ಇಂಥ ಒಳ್ಳೆಯ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.

ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು ಮಾತನಾಡಿ, ಉರಿಯುವ ದೀಪ ಸಹಸ್ರಾರು ಜನರಿಗೆ ಬೆಳಕು ನೀಡುವಂತೆ ಆಚಾರ್ಯರು ಮತ್ತು ಋಷಿಮುನಿಗಳು ತೋರಿದ ದಾರಿ ನಮ್ಮೆಲ್ಲರ ಬಾಳಿಗೆ ಬೆಳಕು ನೀಡುತ್ತವೆ. ಪರಶಿವನ ಸಾಕಾರ ರೂಪವೇ ಶ್ರೀ ಗುರು. ಗುರು, ಧರ್ಮ, ದೇವರಲ್ಲಿ ನಮ್ಮೆಲ್ಲರ ನಂಬಿಕೆ ಗಟ್ಟಿಯಾಗಬೇಕೆಂದರು.

ಕುರವತ್ತಿ ಹಿರೇಮಠದ ನಂದೀಶ್ವರ ಶಿವಾಚಾರ್ಯರು, ಹಿರೇಹಡಗಲಿ ಬೇಲೂರು ಶಾಖಾ ಮಠದ ಹಾಲಸ್ವಾಮಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ವಿಠಲಾಪುರ ಹಿರೇಮಠದ ಗಂಗಾಧರಸ್ವಾಮಿ ಇವರಿಂದ ಭಕ್ತಿ ಗೀತೆ ಜರುಗಿತು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಮಾತನಾಡಿ, ಬದುಕಿನ ಪುಸ್ತಕ ಹಳೆಯದಾದರೂ ನೆನಪಿನ ಪುಟಗಳು ಹೊಸದಾಗಿಯೇ ಇರುತ್ತವೆ. ಜಗತ್ತಿನ ಹಿಂದೆ ಸಾವಿರಾರು ಜನರು ಹೋಗುವುದು ಇತಿಹಾಸವಲ್ಲ. ಒಬ್ಬ ವ್ಯಕ್ತಿಯ ಹಿಂದೆ ಇಡೀ ಜಗತ್ತು ಬರುವುದು ನಿಜವಾದ ಇತಿಹಾಸ. ದಿಂಡದಹಳ್ಳಿ ಲಿಂ.ಶ್ರೀ ಶಿವಾನಂದ ಶ್ರೀಗಳವರ ಆದರ್ಶ ಗರಡಿಯಲ್ಲಿ ಪಳಗಿದ ತಾವೆಲ್ಲರೂ ನಿಜವಾದ ಪುಣ್ಯಶಾಲಿಗಳೆಂದರು.


Spread the love

LEAVE A REPLY

Please enter your comment!
Please enter your name here