ಧರ್ಮವನ್ನು ಜಾತಿಗೆ ಅಂಟಿಸಬಾರದು: ಮಲ್ಲಿಕಾರ್ಜುನ ಶಿವಾಚಾರ್ಯರು

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಧರ್ಮ ಎಂಬುದನ್ನು ತೊರಿಸಲಾಗುವುದಿಲ್ಲ. ಅದು ಒಂದು ಆಚರಣೆಯಾಗಿದ್ದು, ಆಚರಣೆಯ ಮೂಲಕವೇ ಅದನ್ನು ತಿಳಿಯಬಹುದು ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

Advertisement

ಸಮೀಪದ ಅಬ್ಬಿಗೆರೆ ಗ್ರಾಮದ ಹಿರೇಮಠದಲ್ಲಿ ಲಿಂ. ಸೋಮಶೇಖರ ಶಿವಾಚಾರ್ಯರ 5ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ ಪ್ರವಚನ ನೀಡಿದ ಅವರು, ಮಠ-ಮಾನ್ಯಗಳಲ್ಲಿ ನಡೆಯುವ ಪ್ರವಚನ ಕೇಳುವದರಿಂದ ಮನಸ್ಸು ನಿರ್ಮಲವಾಗುತ್ತದೆ. ಧರ್ಮ ಎಂಬುದನ್ನು ಜಾತಿಗೆ ಅಂಟಿಸಬಾರದು. ಧರ್ಮದಿಂದ ನಡೆದರೆ ಜೀವನವೇ ಪಾವನವಾಗುತ್ತದೆ. ಎಲ್ಲರಲ್ಲೂ ದಯಾ ಭಾವದಿಂದ ನಡೆದುಕೊಂಡು ಜೀವನ ಪಾವನಗೊಳಿಸಿಕೊಳ್ಳಿ ಎಂದರು.

ಅಬ್ಬಿಗೇರಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಮಾನವ ದೇವಮಾನವನಾಗಲು ಧರ್ಮದಿಂದ ನಡೆದಾಗ ಮಾತ್ರ ಸಾಧ್ಯ. ಮನಸ್ಸನ್ನು ಕಲಕಿದರೆ ತಾಳ್ಮೆಯನ್ನು ಕಳೆಯುತ್ತದೆ. ಪ್ರತಿಯೊಬ್ಬ ವ್ಯಕ್ತಿ ಭಕ್ತಿ, ಶ್ರದ್ಧೆಯ ಮಾರ್ಗದಲ್ಲಿ ನಡೆದರೆ ಬದುಕು ಸಾರ್ಥಕಗೊಂಡು ಜೀವನದಲ್ಲಿ ಸುಖ, ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂದು ತಿಳಿಸಿದರು.

ಚಿತ್ರದುರ್ಗದ ಹಾಸ್ಯ ಸಾಹಿತಿ ಪಿ. ಜಗನ್ನಾಥ್ ಶ್ರೀಮಠದ ಪರಂಪರೆಯನ್ನು ತಿಳಿಸಿದರು. ನರೇಗಲ್ಲ ಪಟ್ಟಣದ ಅನ್ನಪೂಣೇಶ್ವರಿ ಮಹಿಳಾ ಸಂಘದವರು ವಿಭೂತಿ ಮಹಿಮೆ ಗೀತೆಯನ್ನು ಹಾಡಿದರೆ, ಬಸವರಾಜ ಹನುಮನಾಳ ಹಾಗೂ ಶಿವಾನಂದ ಕಮ್ಮಾರ ಸಂಗೀತ ಸೇವೆ ಸಲ್ಲಿಸಿದರು. ಡಾ. ಆರ್.ಕೆ. ಗಚ್ಚಿನಮಠ, ಅಬ್ಬಿಗೆರೆ ಗ್ರಾಮದ ಗಣ್ಯರು ಉಪಸ್ಥಿತರಿದ್ದರು. ಅಂದಪ್ಪ ವೀರಾಪೂರ ನಿರ್ವಹಿಸಿದರು.


Spread the love

LEAVE A REPLY

Please enter your comment!
Please enter your name here