ವಿಜಯಸಾಕ್ಷಿ ಸುದ್ದಿ, ರಾಣೇಬೆನ್ನೂರು: ಮಾನವ ಯಾವಾಗಲೂ ಸುಖಾಪೇಕ್ಷಿ. ಆದರ್ಶ ಮತ್ತು ಅರಿವಿನಿಂದ ಮಾತ್ರ ಜೀವನ ಸಮೃದ್ಧಗೊಳ್ಳಲು ಸಾಧ್ಯ. ಜೀವನ ವಿಕಾಸಕ್ಕೆ ಧರ್ಮಾಚರಣೆ ಬಹಳ ಅವಶ್ಯಕವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ತಾಲೂಕಿನ ದೇವಗೊಂಡನಕಟ್ಟಿ ಗ್ರಾಮದಲ್ಲಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ವ್ಯರ್ಥವಾಗುತ್ತದೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಜಾತಿ-ಮತ-ಪಂಥ ಎನ್ನದೇ ಎಲ್ಲಾ ವರ್ಗದ ಜನರಿಗೆ ವಿಶ್ವಬಂಧುತ್ವದ ಆದರ್ಶ ಮೌಲ್ಯಗಳನ್ನು ಬೋಧಿಸಿ ಉದ್ಧರಿಸಿದ್ದನ್ನು ಯಾವತ್ತೂ ಮರೆಯಲಾಗದು. ದೇವಗೊಂಡನಕಟ್ಟಿ ಗ್ರಾಮ ಚಿಕ್ಕದಾದರೂ ಬಹು ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷ ತಂದಿದೆ. ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರ ಹತ್ತನೇ ವರ್ಷದ ಪುಣ್ಯಸ್ಮರಣೋತ್ಸವ ಆಚರಿಸುತ್ತಿರುವುದು ತಮ್ಮೆಲ್ಲರಲ್ಲಿರುವ ಗುರುಭಕ್ತಿಗೆ ಸಾಕ್ಷಿಯಾಗಿದೆ ಎಂದರು.
ಮಾಜಿ ಶಾಸಕ ಅರುಣಕುಮಾರ ಪೂಜಾರಿ ಮಾತನಾಡಿ, ನಮ್ಮಲ್ಲಿ ಧರ್ಮಾಚರಣೆ ಬೆಳೆದು ಬರಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡಬೇಕೆಂದರು.
ಜುಂಜಪ್ಪ ಹೆಗ್ಗಪ್ಪನವರ, ಎಸ್.ಎಸ್. ರಾಮಲಿಂಗಣ್ಣನವರ, ಸೋಮಶೇಖರಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಪವಿತ್ರ ಸಮಾರಂಭದಲ್ಲಿ ಹೊನ್ನಾಳಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಅವರಗೊಳ್ಳದ ಓಂಕಾರ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಮತ್ತು ರಾಣೇಬೆನ್ನೂರು ಹಿರೇಮಠದ ಶಿವಯೋಗಿ ಶಿವಾಚಾರ್ಯರು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ರಾಣೇಬೆನ್ನೂರಿನ ಕಸ್ತೂರಿ ಪಾಟೀಲ ಮತ್ತು ಹಲಗೇರಿಯ ಗೀತಾ ಅಜ್ಜೋಡಿಮಠ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಪಡೆದರು.
ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ವೀರಶೈವ ಧರ್ಮ ಅತ್ಯಂತ ಪ್ರಾಚೀನ ಧರ್ಮವಾಗಿದೆ. ಮಾನವ ಧರ್ಮಕ್ಕೆ ಜಯವಾಗಲಿ — ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ತಪೋವಾಣಿ ಸರ್ವಕಾಲಕ್ಕೂ ಅನ್ವಯವಾಗುತ್ತದೆ. ಸಮಾಜದಲ್ಲಿ ಎಲ್ಲರೂ ಸಾಮರಸ್ಯ ಸದ್ಭಾವನೆಯಿಂದ ಬಾಳುವುದು ಅವಶ್ಯಕವಾಗಿದೆ ಎಂದರು.



