ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಅಬ್ಬಿಗೇರಿ ಗ್ರಾಮದ ಪಾಲಾ-ಬದಾಮಿ ರಸ್ತೆ, ನರೇಗಲ್ಲ ರಸ್ತೆಯಲ್ಲಿನ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಬುಧವಾರ ಜರುಗಿತು.
ಅಬ್ಬಿಗೇರಿ ಗ್ರಾಮದ ಪಾಲಾ-ಬದಾಮಿ ರಸ್ತೆಯಲ್ಲಿನ ಸರ್ಕಾರಿ ಗಂಡುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗಳ ಕೌಂಪೌಂಡ್ ಸುತ್ತಲೂ ನಿರ್ಮಿಸಲಾಗಿದ್ದ 30ಕ್ಕೂ ಅಧಿಕ ಅನಧಿಕೃತ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು, ಪಾಲಕರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ರೋಣ ತಾ.ಪಂ ಇಒ ಅವರಿಗೆ ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬುಧವಾರ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿ ತೆರವು ಕಾರ್ಯಾಚರಣೆ ಕೈಗೊಂಡರು.
ರೋಣ ತಹಸೀಲ್ದಾರ ನಾಗರಾಜ ಕೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು, ರೋಣ ಪಿಎಸ್‌ಐ ಪ್ರಕಾಶ ಬಣಕಾರ, ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ, ಜೆಇ ಸಂತೋಷ ನೀಲಣ್ಣವರ, ಸಂಗಯ್ಯ ಗದ್ದನಕೇರಿ, ಪಿಡಿಒ ಲೋಹಿತ್ ಎಂ, ಸಿಆರ್‌ಪಿ ಎಸ್.ಆರ್. ಮೂಲಿಮನಿ ಇದ್ದರು.



