ವಿಜಯಸಾಕ್ಷಿ ಸುದ್ದಿ, ರೋಣ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಹಿಸಿರುವ ಬಿಎಲ್‌ಒ ಕೆಲಸದಿಂದ ಶಿಕ್ಷಕರನ್ನು ಕೈಬಿಡಬೇಕು. ಬಿಎಲ್‌ಒ ಕೆಲಸ ನಿರ್ವಹಿಸುವುದರಿಂದ ಬೋಧನಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ರೋಣ ತಾಲೂಕಾ ಶಿಕ್ಷಕರ ಸಂಘದ ವತಿಯಿಂದ ಬಿಇಒ ಅರ್ಜುನ ಕಾಂಬೋಗಿಯವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ವಾಯ್.ಡಿ. ಗಾಣಿಗೇರ ಮಾತನಾಡಿ, ಬಿಎಲ್‌ಒ ಕೆಲಸದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಹಿನ್ನಡೆಯಾಗುತ್ತಿದೆ. ಅಲ್ಲದೆ ಬಿಎಲ್‌ಒ ಕೆಲಸಕ್ಕೆ ನಿಯೋಜನೆಗೊಂಡ ಶಿಕ್ಷಕರು ಶಾಲೆಗೆ ಬಂದು ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೆ, ಶಿಕ್ಷಕರಿಗೂ ಸಹ ಅನೇಕ ಕೆಲಸಗಳ ಒತ್ತಡಗಳಿವೆ. ಹೀಗಾಗಿ, ಮಕ್ಕಳಿಗೆ ಗುಣಮಟ್ಟದ ಅಕ್ಷರ ಜ್ಞಾನ ಒದಗಿಸುವ ನಿಟ್ಟಿನಲ್ಲಿ ಶಿಕ್ಷಕರನ್ನು ಬಿಎಲ್‌ಒ ಕೆಲಸದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಸಿ.ಕೆ. ಕೇಸರಿ ಮಾತನಾಡಿ, ಬಿಎಲ್‌ಒ ಕೆಲಸಕ್ಕೆ ಶಿಕ್ಷಕರನ್ನು ನೇಮಕ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅನೇಕ ತೊಂದರೆಗಳು ಉಂಟಾಗುತ್ತಿವೆ. ಶಿಕ್ಷಕರು ಸಹ ಶಾಲೆಯಲ್ಲಿ ತಮ್ಮ ದೈನಂದಿನ ಚಟುವಟಿಕೆ ಕುರಿತು ಮಾಹಿತಿ ಕೊಡಬೇಕು. ಹೀಗಿರುವಾಗ, ಬಿಎಲ್‌ಒ ಕೆಲಸದಿಂದ ಶಿಕ್ಷಕರಿಗೆ ಮತ್ತಷ್ಟು ತೊಂದರೆಯಾಗುತ್ತಿದ್ದು, ಇದನ್ನು ಗಮನಿಸಿ ಶಿಕ್ಷಕರನ್ನು ಬಿಎಲ್‌ಒ ಕೆಲಸದಿಂದ ಬಿಡುಗಡೆಗೊಳಿಸಬೇಕು ಎಂದರು.
ತಾಲೂಕಾ ನೌಕರ ಸಂಘದ ಅಧ್ಯಕ್ಷ ಎಸ್.ಬಿ. ದಾನಪ್ಪಗೌಡ್ರ, ಎಂ.ವಾಯ್. ಜಕ್ಕರಸಾನಿ, ಬಿ.ಎಸ್. ಹಿರೇಮಠ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.



