ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎ ಎಸ್ ರವಿಕುಮಾರ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರವಿಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ರವಿಕುಮಾರ್ ಅವರಿಗೆ ಪತ್ನಿ ಮತ್ತು ಮಕ್ಕಳಿದ್ದರೂ ಸಹ ಕೆಲ ವರ್ಷಗಳಿಂದ ಒಬ್ಬರೇ ವಾಸಿಸುತ್ತಿದ್ದರು.
ಮೃತ ರವಿಕುಮಾರ್ ಅವರು ನಟ ನಂದಮೂರಿ ಬಾಲಕೃಷ್ಣ ನಟನೆಯ ‘ವೀರಭದ್ರ’ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಈ ಸಿನಿಮಾ ಹಿಟ್ ಆಗಿತ್ತು. ನಿತಿನ್ ನಟನೆಯ ‘ಆಟಾಡಿಸ್ತ’, ಗೋಪಿಚಂದ್ ನಟನೆಯ ‘ಶೌಖ್ಯಂ’, ರಾಜ್ ತರುಣ್ ನಟನೆಯ ‘ತಿರಗಬಡರಾ ಸಾಮಿ’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ಸಮಯದಿಂದ ಸಿನಿಮಾ ರಂಗದಿಂದ ದೂರವಿದ್ದ ರವಿ ಕುಮಾರ್ ಇದೀಗ ಕೊನೆಯುಸಿರೆಳೆದಿದ್ದಾರೆ. ಎಎಸ್ ರವಿಕುಮಾರ್ ನಿಧನಕ್ಕೆ ತೆಲುಗು ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ನಿರ್ದೇಶಕ ರವಿಕುಮಾರ್ ಅವರಿಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ, ಆದರೆ ಅದು ಸಾವಿಗೆ ಕಾರಣ ಎಂದು ಅಧಿಕೃತವಾಗಿ ದೃಢಪಡಿಸಲಾಗಿಲ್ಲ.



