ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಅಸ್ಪೃಶ್ಯತೆಯನ್ನು ನಿವಾರಿಸಿ ಸಮಾಜದಲ್ಲಿ ಸರ್ವರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ಸತ್ ಕ್ರಾಂತಿಗೆ ಮುನ್ನುಡಿ ಬರೆದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ನಗರದ ಆನಂದರಾವ್ ವೃತ್ತದಲ್ಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಮಾಜದಲ್ಲಿರುವ ಮೇಲು-ಕೀಳು ಎಂಬ ತಾರತಮ್ಯವನ್ನು ಹೋಗಲಾಡಿಸಿ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಭಗವಂತನನ್ನು ಅರ್ಚಿಸಲು ಸಮಾನ ಅವಕಾಶವಿದ್ದು, ಎಲ್ಲ ವರ್ಗದ ಜನರಿಗೆ ಸಂಸ್ಕಾರ ನೀಡುವುದಕ್ಕಾಗಿ 18 ಜಾತಿ ಜನಾಂಗಗಳಿಗೆ ಪ್ರತ್ಯೇಕವಾದ ಮಠಗಳನ್ನು ನಿರ್ಮಿಸುವ ಮೂಲಕ ಯುಗ ಯುಗಗಳ ಹಿಂದೆಯೇ ಧಾರ್ಮಿಕ ಸತ್ ಕ್ರಾಂತಿಗೆಯನ್ನು ಮಾಡಿದ ಮಹಾಪುರುಷ ಶ್ರೀ ಜಗದ್ಗುರು ರೇಣುಕಾಚಾರ್ಯರು. ನೆರೆಯ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಸ್ವಯಂಭು ಸೋಮೇಶ್ವರ ಶಿವಲಿಂಗದಿಂದ ಆವಿರ್ಭವಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾಡಿದ ಸಾಮಾಜಿಕ ಕ್ರಾಂತಿಯ ಕುರುಹುಗಳನ್ನು ಇಂದಿಗೂ ಕಾಣಬಹುದು.
ಅಂದು ರೇಣುಕಾಚಾರ್ಯರು ಬೆಳಗಿದ ಧರ್ಮ ದೀವಿಗೆಯು ನಿರಂತರವಾಗಿ ಇಂದಿಗೂ ಸಮಾಜಕ್ಕೆ ಜ್ಞಾನದ ಬೆಳಕನ್ನು ನೀಡುತ್ತಿದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ನೀಡುವ ಸಂಸ್ಕಾರ ಜೀವನ ಪರ್ಯಂತ ಸತ್ಫಲ ನೀಡುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅಂತಹ ಸಂಸ್ಕಾರ ಪಡೆಯುತ್ತಿದ್ದಾರೆ ಎಂದರು.
ನಾಡು ಕಂಡ ಶ್ರೇಷ್ಠ ವಿದ್ವಾಂಸ ಡಾ.ಜಚನಿಯವರು ಬರೆದಿರುವ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಕನ್ನಡಾನುವಾದದ ಕೃತಿಯನ್ನು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಮರುಮುದ್ರಣವಾದ ಕೃತಿಯನ್ನು ಹಿರಿಯ ವಿದ್ವಾಂಸ ಡಾ. ಸಿ.ಶಿವಕುಮಾರಸ್ವಾಮಿ ಸಂಪಾದಿಸಿದ್ದು, 1380 ಶ್ಲೋಕಗಳಿಂದ ಕೂಡಿದೆ.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಮೀನಾಕ್ಷಿ ಖಂಡಿಮಠ ಸಾಮಾಜಿಕ ನೆಲೆಗಟ್ಟಿನಲ್ಲಿ ರೇಣುಕಾಚಾರ್ಯರ ಕೊಡುಗೆಗಳ ಕುರಿತು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಡೀನ್ ಡಾ. ಎ.ಸಿ. ವಾಲಿಯವರು ಶ್ರೀ ಜಗದ್ಗುರು ರೇಣುಕರ ಕ್ರಾಂತಿಗಳ ಕುರಿತು ಉಪನ್ಯಾಸ ನೀಡಿದರು.
ಎಸ್‌ಜೆಆರ್ ವಿದ್ಯಾಸಂಸ್ಥೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಪಿಎಚ್‌ಡಿ ಪಡೆದ ಸಂಸ್ಥೆಯ ಉಪನ್ಯಾಸಕರಿಗೆ, ಉತ್ತಮವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಸಿದ್ದರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ವಿದ್ವಾಂಸರಾದ ಡಾ. ಸಿ.ಶಿವಕುಮಾರಸ್ವಾಮಿ, ಶ್ರೀ ರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು. ಪ್ರೊ. ಆರ್.ರೇಖಾ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಯು.ಎಂ. ಬಸವರಾಜ ಸ್ವಾಗತಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರ ಆದರ್ಶ ಮೌಲ್ಯಗಳ ಬಗ್ಗೆ ಜನರಿಗೆ ಹೆಚ್ಚು ಪರಿಚಯವಿಲ್ಲದಿರುವುದರಿಂದ ವ್ಯಾಪಕವಾಗಿ ಪ್ರಚಾರ ಮಾಡುವ ಅಗತ್ಯವಿದ್ದು, ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಚಿಂತನೆ ಇದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.



