ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಭಾವೈಕ್ಯತೆ ಮತ್ತು ಆಧ್ಯಾತ್ಮ ಭಾರತದ ಉಸಿರು. ಸಾತ್ವಿಕ-ತಾತ್ವಿಕ ಹಿತ ಚಿಂತನಗಳನ್ನು ಬೆಳೆಸುವುದರ ಮೂಲಕ ಭಾವೈಕ್ಯತೆಯ ಸೇತುವೆಯನ್ನು ಕಟ್ಟಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಾಂತಿ-ನೆಮ್ಮದಿಯ ಬದುಕಿಗೆ ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರವಾದುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ಬೆಳಿಗ್ಗೆ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಸಂದರ್ಭದಲ್ಲಿ ಜರುಗಿದ ಶಿವದ್ವೈತ ಸಮಾವೇಶ ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಾಹಿತ್ಯ-ಸಂಸ್ಕೃತಿ ಈ ನಾಡಿನ ಅಮೂಲ್ಯ ಸಂಪತ್ತು. ಸಂಪತ್ತು ಬೆಳೆದಂತೆ ಸಂಸ್ಕೃತಿ ಸಭ್ಯತೆ ಬೆಳೆದುಕೊಂಡು ಬರಬೇಕು. ಸಮಾಜದ ಓರೆ-ಕೋರೆಗಳನ್ನು ತಿದ್ದಿ ತೀಡುವುದೇ ಮಹಾತ್ಮರ ಜೀವನದ ಗುರಿಯಾಗಿದೆ. ಮೌಲ್ಯಾಧಾರಿತ ಬದುಕಿಗೆ ಶ್ರೀ ರೇಣುಕಾಚಾರ್ಯರು ಕೊಟ್ಟ ದಶ ಧರ್ಮ ಸೂತ್ರಗಳು ಆಶಾಕಿರಣವಾಗಿವೆ. ಮಾನವೀಯ ಮೌಲ್ಯಗಳ ಸಂವರ್ಧನೆ ಮತ್ತು ಸಾಮಾಜಿಕ ಸತ್ಕ್ರಾಂತಿಯ ಆದರ್ಶಗಳನ್ನು ಎತ್ತಿ ಹಿಡಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಮಹಾಮುನಿ ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶಿಖಾಮಣಿಯ ತತ್ವ ಸಿದ್ಧಾಂತಗಳು ಮನದ ನೆಮ್ಮದಿಗೆ ಮತ್ತು ಉನ್ನತಿಗೆ ಮೂಲ ಸೆಲೆಯಾಗಿವೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಕವಿತಾ ಮಿಶ್ರಾ ಮಾತನಾಡಿ, ಕ್ರಿಯಾಶೀಲ ಬದುಕು ಜೀವನದ ಶ್ರೇಯಸ್ಸಿಗೆ ಮೂಲ. ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಮ್ಮೆಲ್ಲರ ಗುರಿಯಾಗಬೇಕು. ಭೂ ತಾಯಿ ಮಡಿಲಲ್ಲಿ ಬೆವರು ಸುರಿಸಿದ ವ್ಯಕ್ತಿಯ ಬಾಳು ವಿಕಾಸಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಕಾಯಕ ಜೀವನ ಜೀವನಕ್ಕೆ ಚೈತನ್ಯ ಶಕ್ತಿಯನ್ನು ಕೊಡುವುದೆಂಬ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಿರಿವಾಣಿ ನನ್ನ ಬದುಕಿನಲ್ಲಿ ಕಂಡುಕೊಂಡಿದ್ದೇನೆ. ಕೃಷಿ ಪ್ರಾರಂಭದಲ್ಲಿ ಕಷ್ಟ ಎನಿಸಿದರೂ ನಿರಂತರ ಶ್ರಮ ಸಾಧನೆಯಿಂದ ಉಜ್ವಲ ಭವಿಷ್ಯ ರೂಪಿತಗೊಳ್ಳುತ್ತದೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದರು.
ವೀರಶೈವ ರೇಣುಕ ರೇವಣಸಿದ್ಧ ಸತ್ಯ ದರ್ಶನ ಕೃತಿ ಬಿಡುಗಡೆ ಮಾಡಿದ ಆಧ್ಯಾತ್ಮ ತತ್ವ ಚಿಂತಕ, ಸಂಶೋಧಕ ಡಾ. ಎ.ಸಿ. ವಾಲಿ ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಶತಮಾನ ಪುರುಷರಲ್ಲ. ಯುಗಪುರುಷರು. ಜಾತಿ-ಜನಾಂಗಗಳ ಗಡಿ ಮೀರಿ ಮಾನವೀಯ ಉದಾತ್ತ ಮೌಲ್ಯಗಳನ್ನು ಪ್ರತಿಪಾದಿಸಿದ ಪರಮಾಚಾರ್ಯರು. ಅಂಗ ಅವಗುಣಗಳನ್ನು ಸಂಸ್ಕಾರದ ಮೂಲಕ ದೂರ ಮಾಡಿ ಸಮೃದ್ಧ ಬದುಕಿಗೆ ಶ್ರೀಕಾರ ಹಾಕಿದ ಇತಿಹಾಸ ಪುರುಷರಾಗಿದ್ದಾರೆ ಎಂದರು.
ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಪ್ರತಿಷ್ಠಿತ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ರಾಯಚೂರು ಜಿಲ್ಲೆ ಕವಿತಾಳ ಗ್ರಾಮದ ಸಾವಯವ ಕೃಷಿ ತಜ್ಞೆ ಡಾ. ಕವಿತಾ ಮಿಶ್ರಾ ಇವರಿಗೆ ಪ್ರದಾನ ಮಾಡಲಾಯಿತು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.
ಮುಖ್ಯ ಅತಿಥಿಗಳಾಗಿ ಸಚಿವ ಡಾ. ಎಂ.ಬಿ. ಪಾಟೀಲರ ಪುತ್ರ ಬಸನಗೌಡ ಪಾಟೀಲ,
ರೋಣ ಶಾಸಕ ಜಿ.ಎಸ್. ಪಾಟೀಲ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರು, ಕೊಡ್ಲಿಪೇಟೆ ರಾಜೇಶ್ವರಿ ನಾಗರಾಜ್, ಶಿವಮೊಗ್ಗದ ಎಸ್.ಎಸ್. ಜ್ಯೋತಿಪ್ರಕಾಶ್ ಭಾಗವಹಿಸಿದ್ದರು. ಪಡಸಾವಳಿ-ಉದ್ಗಿರಿ ಕ್ಷೇತ್ರದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಜಿ.ಜಿ. ರಕ್ಷಿತಾ ಇವರು ಭರತನಾಟ್ಯ ಪ್ರದರ್ಶಿಸಿದರು. ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ ಸ್ವಾಗತಿಸಿದರು. ಎಂ.ಸAಗಮೇಶ ಉತ್ತಂಗಿ ಪ್ರಾರ್ಥಿಸಿದರೆ, ಶಾಂತಾ ಆನಂದ ನಿರೂಪಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ವಿ.ಆರ್.ಎಲ್ ಸಮೂಹ ಸಂಸ್ಥೆ ಚೇರಮನ್ ಡಾ.ವಿಜಯ ಸಂಕೇಶ್ವರ ಮಾತನಾಡಿ, ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು. ಮನುಷ್ಯರಲ್ಲಿ ವೈಚಾರಿಕ ಮನೋಭಾವನೆಗಳು ಬೆಳೆದು ಬರಲಿ. ಆದರೆ ನಾಸ್ತಿಕ ಮನೋಭಾವ ಬೆಳೆಯಬಾರದು. ಹುಟ್ಟು-ಸಾವು ಯಾರನ್ನೂ ಬಿಟ್ಟಿಲ್ಲ. ಇವುಗಳ ಮಧ್ಯದ ಬದುಕು ಸಮೃದ್ಧಗೊಳ್ಳಲು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಚಾರಧಾರೆಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ ಎಂದರು.