ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಈಗಾಗಲೇ ಮಧ್ಯಂತರ ಜಾಮೀನಿನ ಮೇಲೆ ಹೊರಗಡೆ ಇರುವ ನಟ ದರ್ಶನ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಹೌದು ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಿ ಕೋರ್ಟ್ ಆದೇಶ ನೀಡಿದೆ. ಇಂದು ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಾಡಿದ್ದಾರೆ.
ದರ್ಶನ್ ಅವರ ಪರವಾಗಿ ವಕೀಲ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿದರು. ಮಧ್ಯಂತರ ಜಾಮೀನು ಅವಧಿ ವಿಸ್ತರಿಸಲು ಮನವಿ ಮಾಡಿದರು. ಈವರೆಗೂ ದರ್ಶನ್ ಯಾಕೆ ಸರ್ಜರಿ ಮಾಡಿಸಿಲ್ಲ ಎಂಬ ಪ್ರಶ್ನೆಗೆ ಈ ಮೊದಲು ನಡೆದ ವಿಚಾರಣೆಯಲ್ಲಿ ಸಿ.ವಿ. ನಾಗೇಶ್ ಅವರು ಕಾರಣ ನೀಡಿದ್ದರು. ನಟನಿಗೆ ರಕ್ತದೊತ್ತಡ ವ್ಯತ್ಯಾಸ ಆಗುತ್ತಿರುವುದರಿಂದ ಶಸ್ತ್ರ ಚಿಕಿತ್ಸೆ ಇನ್ನೂ ನಡೆಸಿಲ್ಲ ಎಂದು ಸಿ.ವಿ. ನಾಗೇಶ್ ಹೇಳಿದ್ದರು.
ಬಳ್ಳಾರಿ ಜೈಲಿನಲ್ಲಿ ಇದ್ದಾಗ ದರ್ಶನ್ ಅವರಿಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿತ್ತು. ಅಲ್ಲಿಯೇ ಅವರಿಗೆ ಕೆಲವು ಪರೀಕ್ಷೆಗಳನ್ನು ಮಾಡಿದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಿದ್ದರು. ಎಲ್ಲ ವರದಿಗಳನ್ನು ಆಧರಿಸಿ ದರ್ಶನ್ಗೆ 6 ವಾರಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಅವರ ಜಾಮೀನು ಅವಧಿ ಡಿಸೆಂಬರ್ 11ಕ್ಕೆ ಅಂತ್ಯವಾಗುವ ಹಿನ್ನೆಲೆಯಲ್ಲಿ ವಿಸ್ತರಣೆಗಾಗಿ ಮನವಿ ಮಾಡಲಾಗಿತ್ತು. ಈಗ ಮುಂದಿನ ದಿನಾಂಕದವರೆಗೂ ಮಧ್ಯಂತರ ಜಾಮೀನು ವಿಸ್ತರಣೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ.