ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಿತು. ತನಿಖಾಧಿಕಾರಿಗಳ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಡಿಸೆಂಬರ್ 09 ಮಧ್ಯಾಹ್ನ 2:30ಕ್ಕೆ ಮುಂದೂಡಿದರು.
ದರ್ಶನ್ ಪರವಾಗಿ ಹಿರಿಯ ಲಾಯರ್ ಸಿ.ವಿ. ನಾಗೇಶ್ ಅವರು ಇತ್ತೀಚೆಗೆ ಹೈಕೋರ್ಟ್ನಲ್ಲಿ ವಾದ ಮಂಡನೆ ಮಾಡಿದ್ದರು. ಇಂದು ವಾದ ಮಾಡಿದ ಎಸ್ಪಿಪಿ ಪ್ರಸನ್ನ ಕುಮಾರ್ ಅವರು, ರೇಣುಕಾ ಸ್ವಾಮಿ ಏಪ್ರಿಲ್ ತಿಂಗಳಿನಿಂದಲೂ ಮೆಸೇಜ್ ಮಾಡುತ್ತಿದ್ದಾನೆ. ಆಗಿನಿಂದಲೂ ಏಕೆ ಬ್ಲಾಕ್ ಮಾಡಲಿಲ್ಲ. ಬದಲಿಗೆ ನಿನ್ನ ನಂಬರ್ ಎಂದು ಪವಿತ್ರಾ ಮೆಸೇಜ್ ಮಾಡಿದ್ದಾರೆ. ಆ ನಂತರ ನಂಬರ್ ಅನ್ನು ಆರೋಪಿ 3 ಪವನ್ಗೆ ನೀಡಿ ಸಂಭಾಷಣೆ ನಡೆಸುವಂತೆ ಹೇಳಿದ್ದಾರೆ ಎಂದು ಹೇಳುವ ಮೂಲಕ,
ರೇಣುಕಾ ಸ್ವಾಮಿ ಅಪಹರಣದಲ್ಲಿ ಪವಿತ್ರಾ ಕೈವಾಡ ಇದೆ ಎಂದರು. ದರ್ಶನ್ ಅನಾರೋಗ್ಯದ ವಿಷಯವಾಗಿ ಅವರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪ್ರಸನ್ನ ಕುಮಾರ್, ದರ್ಶನ್ ಪರ ವಕೀಲರು, ನ್ಯಾಯಾಲಯಕ್ಕೆ ಸುಳ್ಳು ಹೇಳಿದ್ದಾರೆ, ನ್ಯಾಯಾಲಯದ ದಾರಿ ತಪ್ಪಿಸುವ ಕಾರ್ಯ ಮಾಡಿದ್ದಾರೆ ಎಂದು ವಾದ ಮಂಡಿಸಿದರು. ಅಂತಿಮವಾಗಿ ನ್ಯಾಯಮೂರ್ತಿಗಳು ಪ್ರಕರಣದ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದ್ದಾರೆ.