ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಇಂದು ಕೋರ್ಟ್ಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಬೆಂಗಳೂರಿನ ೫೭ನೇ ಸಿಸಿಎಚ್ ಕೋರ್ಟ್ ಗೆ ದರ್ಶನ್ ಹಾಜರಾಗಿದ್ದು ಈ ವೇಳೆ ದರ್ಶನ್ ಜೊತೆ ಧನ್ವೀರ್ ಕೂಡ ಆಗಮಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ೨ ಆರೋಪಿ ದರ್ಶನ್ ಹಾಗೂ ಇನ್ನೂ ಕೆಲ ಆರೋಪಿಗಳಷ್ಟೇ ಇಂದು ವಿಚಾರಣೆ ಎದುರಿಸಿದ್ದಾರೆ. ನಾಗರಾಜು, ವಿನಯ್, ಪವಿತ್ರಗೌಡ ಗೈರಾಗಿದ್ದಾರೆ. ಬಹುತೇಕ ಆರೋಪಿಗಳು ವಿಚಾರಣೆಗೆ ಗೈರಾಗಿದ್ದು ಮುಂದಿನ ತಿಂಗಳು ಅಂದರೆ ಆಗಷ್ಟು 12 ರಂದು ಮತ್ತೆ ಹಾಜರಾಗಲು ಆದೇಶ ನೀಡಲಾಗಿದೆ.
ಸದ್ಯ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿದ್ದು ನಾಳೆ ಶೂಟಿಂಗ್ ಗಾಗಿ ವಿದೇಶಕ್ಕೆ ತೆರಳಲಿದ್ದಾರೆ. ವಿದೇಶಕ್ಕೆ ತೆರಳುವ ಮೊದಲು ದರ್ಶನ್ ಕೋರ್ಟ್ ಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಜುಲೈ ೧೧ರಿಂದ ಜುಲೈ ೩೦ರವರೆಗೆ ದರ್ಶನ್ ಗೆ ವಿದೇಶಿ ಪ್ರವಾಸಕ್ಕೆ ಕೋರ್ಟ್ ಅನುಮತಿ ನೀಡಲಾಗಿದೆ. ಥೈಲ್ಯಾಂಡ್ಗೆ ತೆರಳಲು 57ನೇ ಸೆಷನ್ಸ್ ಕೋರ್ಟ್ ಅವಕಾಶ ನೀಡಿದೆ.
ಪ್ರಸ್ತುತ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿರುವ ದರ್ಶನ್, ದುಬೈ ಮತ್ತು ಯುರೋಪ್ಗೆ ಪ್ರಯಾಣಿಸಲು ಅನುಮತಿ ಕೋರಿ ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 439(1)(ಬಿ) ಅಡಿಯಲ್ಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಇನ್ನೂ ದರ್ಶನ್ ಕೋರ್ಟ್ ಗೆ ಹಾಜರಾಗಲು ಮನೆಯಿಂದ ಹೊರ ಬರುವ ವೇಳೆ ಸ್ವಲ್ಪ ಕುಂಟುತ್ತ ಬಂದಿದ್ದಾರೆ. ಅಲ್ಲದೆ ದರ್ಶನ್ ಮನೆಯಿಂದ ಹೊರ ಬರ್ತಿದ್ದಂತೆ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದು ಅಭಿಮಾನಿಗಳ ಜೊತೆ ದರ್ಶನ್ ಮಾತುಕತೆ ನಡೆಸಿ ಬಳಿಕ ಕೋರ್ಟ್ ಗೆ ತೆರಳಿದ್ದಾರೆ.