ಬೆಂಗಳೂರು: ಜೈಲಿಂದ ಹೊರಬಂದ ಬಳಿಕ ನಿಧಾನಕ್ಕೆ ಸಾಮಾನ್ಯ ಜೀವನ ಶೈಲಿಗೆ ಮರಳುತ್ತಿರುವ ದರ್ಶನ್, ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗುತ್ತಿದ್ದಾರೆ. ಇದರ ಬೆನ್ನಲ್ಲೇ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಜನ ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಹಾಜರಾಗಬೇಕಿದೆ.
ಹೌದು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ 17 ಆರೋಪಿಗಳ ವಿಚಾರಣೆ ನಡೆಯಲಿದೆ. ಜಡ್ಜ್ ಎದುರು ಆರೋಪಿಗಳು ತಮ್ಮ ಹೇಳಿಕೆ ನೀಡಲಿದ್ದಾರೆ. ಜಾಮೀನು ನೀಡುವಾಗ ಆರೋಪಿಗಳಿಗೆ ಹೈಕೋರ್ಟ್ ಷರತ್ತು ವಿಧಿಸಿತ್ತು. ಪ್ರತಿ ತಿಂಗಳು ವಿಚಾರಣೆಗೆ ಹಾಜರಾಗಬೇಕು ಎಂದು ಆರೋಪಿಗಳಿಗೆ ಸೂಚಿಸಿತ್ತು.
ಹೀಗಾಗಿ ಬೆಳಿಗ್ಗೆ 11 ಗಂಟೆಗೆ ನಡೆಯುವ ವಿಚಾರಣೆಯಲ್ಲಿ ಆರೋಪಿಗಳು ಹಾಜರಿ ಹಾಕಲಿದ್ದಾರೆ. ಕೆಲವೊಮ್ಮೆ ಆರೋಪಿಗಳು ಕೋರ್ಟ್ಗೆ ಹಾಜರಾಗಲು ಸಾಧ್ಯ ಆಗದೆ ಇರಬಹುದು. ಈ ವೇಳೆ ಎಲ್ಲಾ ಆರೋಪಿಗಳು ಸೂಕ್ತ ಕಾರಣ ನೀಡಿ ವಿನಾಯಿತಿ ಪಡೆಯಬೇಕು. ಇಲ್ಲದಿದ್ದರೆ ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.