ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 17 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತನಿಖೆ ನಡೆಸಿದ ಪೊಲೀಸರು 17 ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನಡೆಸುತ್ತಿದ್ದ ದರ್ಶನ್ ಅವರನ್ನು ಮೊನ್ನೆಯಷ್ಟೇ ಬಳ್ಳಾರಿ ಸೆಂಟ್ರಲ್ ಜೈಲಿಗೆ ಹಾಕಿದ್ದಾರೆ. ಉಳಿದ ಆರೋಪಿಗಳನ್ನು ಬೇರೆ ಬೇರೆ ಜಿಲ್ಲೆಯ ಜೈಲಿಗಟ್ಟಿದ್ದಾರೆ.
ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ 2 ತಿಂಗಳು 6 ದಿನ ಉಳಿದಿದ್ದ ನಟ ದರ್ಶನ್ 15 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ರಾಜಾತಿಥ್ಯ ಪಡೆದ ಆರೋಪದ ಹಿನ್ನೆಲೆಯಲ್ಲಿ ಆರೋಪಿ ದರ್ಶನ್ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಮುನ್ನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರ ದೇಹಸ್ಥಿತಿ ಹಾಗೂ ಆರೋಗ್ಯದ ಕುರಿತು ವೈದ್ಯರು ಪರಿಶೀಲಿಸಿದ್ದಾರೆ. ಈ ವೇಳೆ ಜೈಲಿಗೆ ಬರುವ ವೇಳೆ 107 ಕೆ.ಜಿ ಇದ್ದ ದರ್ಶನ್ 15 ಕೆ.ಜಿ ತೂಕ ಕಳೆದುಕೊಂಡಿರುವುದು ಗೊತ್ತಾಗಿದೆ.
ರಕ್ತದೊತ್ತಡವು ಸಾಮಾನ್ಯವಾಗಿದೆ. ಜತೆಗೆ ಬೆನ್ನುಹುರಿ ಸೇರಿದಂತೆ ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿ ದೈಹಿಕವಾಗಿ ಸಧೃಡವಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ಕಂಡುಬಂದಿದೆ. ವೈದ್ಯಕೀಯ ವರದಿಯನ್ನು ಬಳ್ಳಾರಿ ಜೈಲಿನ ಮುಖ್ಯ ಅಧೀಕ್ಷಕರಿಗೂ ಸಲ್ಲಿಸಲಾಗಿದೆ ಎಂದು ಜೈಲಿನ ಉನ್ನತ ಮೂಲಗಳು ತಿಳಿಸಿವೆ.