ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ದರ್ಶನ್ ಅವರು ಜಾಮೀನಿಗಾಗಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಇಂದು ನಡೆದಿದೆ. ಪವಿತ್ರಾ ಗೌಡ, ನಾಗರಾಜ್, ಲಕ್ಷ್ಮಣ್ ಮುಂತಾದ ಆರೋಪಿಗಳು ಕೂಡ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್ ಮತ್ತಿತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಕೈಗೊಂಡರು. ಸದ್ಯಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿಕೆ ಮಾಡಲಾಗಿದೆ.
ದರ್ಶನ್ ಪರವಾಗಿ ಹಿರಿಯ ಲಾಯರ್ ಸಿ.ವಿ. ನಾಗೇಶ್ ಅವರು ಇತ್ತೀಚೆಗೆ ಹೈಕೋರ್ಟ್ನಲ್ಲಿ ವಾದ ಮಂಡನೆ ಮಾಡಿದ್ದರು. ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಸೆಬಾಸ್ಟಿಯನ್ ಅವರು ವಾದಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ.
ಎಲ್ಲರೂ ಹೊಡೆದ ಕಾರಣದಿಂದ ರೇಣುಕಾಸ್ವಾಮಿ ಸಾವು ಸಂಭವಿಸಿರಬಹುದು ಎಂದು ವಾದ ಮಾಡಲಾಗಿದೆ. ಆರೋಪಿಗಳ ಪರವಾಗಿ ವಕೀಲರ ವಾದ ಮಂಡನೆ ಅಂತ್ಯವಾಗಿದೆ. ಡಿಸೆಂಬರ್ 6ರಂದು ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಾಡಲಿದ್ದಾರೆ. ಆ ಬಳಿಕ ಜಾಮೀನಿಗೆ ಸಂಬಂಧಿಸಿದ ತೀರ್ಪನ್ನು ಹೈಕೋರ್ಟ್ ನೀಡಲಿದೆ.