ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎ1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ಕಳೆದ ಐದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಈಗಾಗಲೇ ಹಲವು ಭಾರೀ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಬಿಡುಗಡೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಇಂದು ಮತ್ತೆ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಇಂದಾದ್ರು ಹೊರ ಬರ್ತಾರಾ ಎಂಬ ಕುತೂಹಲ ಮನೆ ಮಾಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ಬೇಲ್ ಸಿಗುವ ಭರವಸೆಯಲ್ಲಿದ್ದಾರೆ ಪವಿತ್ರಾ ಗೌಡ.
ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿರುವ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಲಿದೆ. ದರ್ಶನ್, ಪವಿತ್ರಾ ಗೌಡ, ಆರ್. ನಾಗರಾಜು, ಅನುಕುಮಾರ್, ಎಂ. ಲಕ್ಷ್ಮಣ್, ಜಗದೀಶ್ ಅವರ ಜಾಮೀನು ಅರ್ಜಿ ವಿಚಾರಣೆ ಮಾಡಲಾಗುವುದು. ಅನಾರೋಗ್ಯ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಈವರೆಗೂ ಸರ್ಜರಿ ಮಾಡಿಸಿಲ್ಲ. ಆ ಬಗ್ಗೆ ಅವರು ನ್ಯಾಯಾಲಯಕ್ಕೆ ಪ್ರತಿಕ್ರಿಯಿಸಬೇಕಿದೆ.
ಇನ್ನೂ ಯಾಕೆ ಸರ್ಜರಿ ಮಾಡಿಸಿಲ್ಲ, ಬೆನ್ನು ನೋವಿಗೆ ಚಿಕಿತ್ಸೆ ಯಾವ ಹಂತದಲ್ಲಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ದರ್ಶನ್ ಪರ ವಕೀಲರು ಹೈಕೋರ್ಟ್ಗೆ ಇಂದು ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ. ಬಳ್ಳಾರಿ ಜೈಲಿನಲ್ಲಿ ಇದ್ದಾಗ ದರ್ಶನ್ಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಜಾಮೀನು ಪಡೆದು ಅವರು ಬೆಂಗಳೂರಿಗೆ ಬಂದಿದ್ದು, ಕೆಂಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದರ್ಶನ್ ಗೆ ಆರು ವಾರಗಳ ಮಧ್ಯಂತರ ಜಾಮೀನು ಅರ್ಜಿ ಮಂಜೂರು ಮಾಡಲಾಗಿದ್ದು ಅದರಲ್ಲಿ ನಾಲ್ಕು ವಾರಗಳು ಮುಗಿದೇ ಹೋಗಿದೆ. ಹೀಗಾಗಿ ದರ್ಶನ್ ಮುಂದಿನ ನಡೆ ಏನು ಎಂಬ ಕುತೂಹಲ ಶುರುವಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ 17 ಆರೋಪಿಗಳಲ್ಲಿ ಕೆಲವರೀಗೆ ಮಾತ್ರ ಜಾಮೀನು ಸಿಕ್ಕಿದೆ. ಪವನ್, ನಂದೀಶ್ ಅವರ ಜಾಮೀನು ಅರ್ಜಿ ನ.20ರಂದು ವಜಾ ಆಗಿದೆ. ಜಾಮೀನು ಅರ್ಜಿ ವಜಾಗೊಳಿಸಿ ಬೆಂಗಳೂರಿನ ಸಿಸಿಹೆಚ್ 57ರ ಜಡ್ಜ್ ಜೈಶಂಕರ್ ಆದೇಶ ನೀಡಿದ್ದಾರೆ. ಧನರಾಜ್ ಜಾಮೀನು ಅರ್ಜಿ ಬಗ್ಗೆ ಇಂದು ಆದೇಶ ಪ್ರಕಟ ಆಗಲಿದೆ.