ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳ ವಿರುದ್ಧ ಬುಧವಾರದಿಂದ ಟ್ರಯಲ್ ಆರಂಭವಾಗಲಿದೆ. ಡಿಸೆಂಬರ್ 17ಕ್ಕೆ ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಯಾಗಿದ್ದು, ಅದಕ್ಕೂ ಮುನ್ನ ಪ್ರಾಸಿಕ್ಯೂಷನ್ ಸಾಕ್ಷ್ಯ ಸಂಗ್ರಹಕ್ಕೆ ಪೂರ್ವ ಸಿದ್ಧತೆ ಆರಂಭಿಸಿದೆ.
ಸಾಕ್ಷ್ಯ ವಿಚಾರಣೆಗೆ ಮುನ್ನ ಎಸ್ಪಿಪಿ ಪ್ರಸನ್ನ ಕುಮಾರ್, ಸಹಾಯಕ ಎಸ್ಪಿಪಿ ಸಚಿನ್ ಮತ್ತು ತನಿಖಾಧಿಕಾರಿ ಎಸಿಪಿ ಚಂದನ್ ಅವರು ಇಂದು ಘಟನಾ ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ. ರೇಣುಕಾಸ್ವಾಮಿಯನ್ನು ಅಪಹರಿಸಿ ತಂದಿಟ್ಟಿದ್ದ ಶೆಡ್, ಹಲ್ಲೆ ನಡೆಸಿದ ಸ್ಥಳ, ಬಿಡುವಂತೆ ಕೈಮುಗಿದು ಬೇಡಿಕೊಂಡ ಸ್ಥಳ, ಕೊಲೆ ನಡೆದ ಸ್ಥಳ, ನಂತರ ಶವ ಇಟ್ಟಿದ್ದ ಜಾಗ ಹಾಗೂ ರಾತ್ರಿ ಶವ ಬಿಸಾಡಿದ ಸತ್ವ ಅಪಾರ್ಟ್ಮೆಂಟ್ ಬಳಿಯ ಪ್ರದೇಶಗಳನ್ನು ಪರಿಶೀಲಿಸಲಾಗಿದೆ.
ಬೆಂಗಳೂರು 57ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಅವರು ಮೊದಲ ಸಾಕ್ಷಿಗಳಾಗಿ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಮತ್ತು ತಾಯಿ ರತ್ನಪ್ರಭ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ. ಬುಧವಾರ ಅವರಿಬ್ಬರ ಸಾಕ್ಷ್ಯ ವಿಚಾರಣೆ ನಡೆಯಲಿದೆ.



