ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಜನ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು, ಮುಸ್ಲಿಂ ಮೀಸಲಾತಿ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಪಕ್ಷದ ರಾಜ್ಯ ಸಮಿತಿ ನಿಯೋಗದಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆ, ಕರ್ನಾಟಕ ಧರ್ಮ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆಗಳು ಸಂವಿಧಾನ ವಿರೋಧಿ ಕಾಯ್ದೆಗಳಾಗಿವೆ. ಜಾನುವಾರು ಸಂರಕ್ಷಣಾ ಕಾಯ್ದೆಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ರೈತರು ತಾವು ಸಾಕಿದ ಜಾನುವಾರುಗಳನ್ನು ಮಾರಾಟ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕ ಧರ್ಮ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ (ಮತಾಂತರ ನಿಷೇಧ ಕಾಯ್ದೆ) ನೆಪದಲ್ಲಿ ಕೋಮು ವಾದಿಗಳು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ. ಸಂವಿಧಾನವು ಎಲ್ಲರಿಗೂ ತಮಗೆ ಬೇಕಾದ ಧರ್ಮ ಅಪ್ಪಿಕೊಳ್ಳುವ ಹಕ್ಕನ್ನು ನೀಡಿದೆ. ಈ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಈ ಕಾಯ್ದೆಗಳನ್ನು ರದ್ದು ಮಾಡುವ ಭರವಸೆ ನೀಡಿತ್ತು ಎಂದು ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹ್ಮದ್, ರಾಜ್ಯ ಉಪಾಧ್ಯಕ್ಷ ಇಂಜಿನಿಯರ್ ಹಬೀಬುಲ್ಲಾಹ್ ಖಾನ್ ಮತ್ತು ವಲಯ ಕಾರ್ಯದರ್ಶಿ ಸಯ್ಯೇದ್ ಇರ್ಫಾನ್ ಇದ್ದರು.



