ಬೆಂಗಳೂರು: ಫ್ರೀಫೈರ್ ಗೇಮ್ ವ್ಯಸನದಿಂದ ಆರಂಭವಾದ ಒಂದು ಕೊಲೆ ಪ್ರಕರಣ, ಇಡೀ ಕುಟುಂಬದ ಅಂತ್ಯಕ್ಕೆ ಕಾರಣವಾದ ಘಟನೆ ಸೋಲದೇವನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಅಕ್ಕನ ಮಗ ಅಮೋಘಕೀರ್ತಿಯನ್ನು ಕೊಲೆ ಮಾಡಿದ್ದ ಮಾವ ನಾಗಪ್ರಸಾದ್ ಸೇರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವುದು ನಗರವನ್ನೇ ಬೆಚ್ಚಿಬೀಳಿಸಿದೆ.
ಅಮೋಘಕೀರ್ತಿಯ ಸಾವಿನ ಬಳಿಕ ಕುಟುಂಬ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿತ್ತು. ಕೊಲೆಯ ಪಾಪ ಪರಿಹಾರಕ್ಕಾಗಿ ದೇವಾಲಯಗಳಿಗೆ ಭೇಟಿ, ತೀರ್ಥಯಾತ್ರೆಗಳು ನಡೆಸುತ್ತಿದ್ದ ಕುಟುಂಬ, ಕೊನೆಗೆ ಬಿಹಾರದ ಪ್ರವಾಸದ ವೇಳೆ ಒಟ್ಟಿಗೆ ಸಾವಿನ ದಾರಿ ಹಿಡಿದಿದೆ ಎನ್ನಲಾಗಿದೆ. ಮೃತರ ಬಳಿ ನಿದ್ದೆ ಮಾತ್ರೆಗಳು ಪತ್ತೆಯಾಗಿದ್ದು, ಓವರ್ ಡೋಸ್ನಿಂದ ಸಾವಾಗಿರುವ ಶಂಕೆ ವ್ಯಕ್ತವಾಗಿದೆ.
ನಾಗಪ್ರಸಾದ್, ತಾಯಿ ಸುಮಂಗಲಾ (78), ಸಹೋದರಿ ಶಿಲ್ಪಾ (48) ಮತ್ತು ಶ್ರುತಾ (43) ಮೃತಪಟ್ಟಿದ್ದಾರೆ. ಈ ದುರಂತದ ಮೂಲ ಆಗಸ್ಟ್ 8ರಂದು ನಡೆದ ಅಮೋಘಕೀರ್ತಿಯ ಕೊಲೆ ಪ್ರಕರಣ. ಫ್ರೀಫೈರ್ ಗೇಮ್ಗೆ ಅಡಿಕ್ಟ್ ಆಗಿದ್ದ ಬಾಲಕ ಹಣಕ್ಕಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದ. ಹಲ್ಲೆಗೂ ಮುಂದಾದ ಹಿನ್ನೆಲೆಯಲ್ಲಿ ನಾಗಪ್ರಸಾದ್ ಅತಿರೇಕದ ಹೆಜ್ಜೆ ಇಟ್ಟು ಬಾಲಕನನ್ನು ಕೊಲೆ ಮಾಡಿದ್ದ.
ಕೊಲೆ ಬಳಿಕ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ನಾಗಪ್ರಸಾದ್, ನಂತರ ಸೋಲದೇವನಹಳ್ಳಿ ಠಾಣೆಗೆ ಶರಣಾಗಿ ಜೈಲು ಸೇರಿದ್ದ. ಕೆಲ ದಿನಗಳ ಬಳಿಕ ಬೇಲ್ ಪಡೆದು ಹೊರಬಂದ ಆತ ಕುಟುಂಬದೊಂದಿಗೆ ಬಿಹಾರ ಪ್ರವಾಸ ಕೈಗೊಂಡಿದ್ದ. ಇದೀಗ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಪ್ರಶ್ನೆಗಳನ್ನು ಎತ್ತಿದೆ.
ಗೇಮಿಂಗ್ ವ್ಯಸನ, ಮಾನಸಿಕ ಅಪರಾಧ ಭಾರ, ಕುಟುಂಬದ ಒತ್ತಡ ಸೇರಿ ಸಂಭವಿಸಿದ ಈ ದುರಂತವು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



