ನವದೆಹಲಿ: ಭಾರತ ಇಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ.
ದೆಹಲಿಯ ಕರ್ತವ್ಯಪಥದಲ್ಲಿ ಹತ್ತಾರು ವಿಶೇಷತೆಗಳೊಂದಿಗೆ ಗಣರಾಜ್ಯೋತ್ಸವ ಪಥಸಂಚಲನ ನಡೆಯಲಿದ್ದು, ದೇಶದ ಪ್ರಜಾಪ್ರಭುತ್ವದ ಶಕ್ತಿ, ಸೇನಾ ಸಾಮರ್ಥ್ಯ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ವಿಶ್ವದ ಮುಂದೆ ಪ್ರದರ್ಶಿಸಲಾಗುತ್ತಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿ,
“ಗಣರಾಜ್ಯೋತ್ಸವದಂದು ನಮ್ಮ ಎಲ್ಲಾ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳು. ಭಾರತದ ಹೆಮ್ಮೆ ಮತ್ತು ವೈಭವದ ಸಂಕೇತವಾದ ಈ ರಾಷ್ಟ್ರೀಯ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ. ವಿಕಸಿತ ಭಾರತದ ಸಂಕಲ್ಪ ಇನ್ನಷ್ಟು ಬಲಗೊಳ್ಳಲಿ” ಎಂದು ಶುಭಕೋರಿದ್ದಾರೆ.
ಈ ವರ್ಷ ಗಣರಾಜ್ಯೋತ್ಸವವನ್ನು ‘ವಂದೇ ಮಾತರಂ’ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳೂ ಅದೇ ಥೀಮ್ನಡಿ ನಡೆಯಲಿವೆ. ಬೆಳಗ್ಗೆ 10.30ಕ್ಕೆ ಪಥಸಂಚಲನ ಆರಂಭವಾಗಲಿದ್ದು, ಸುಮಾರು 90 ನಿಮಿಷಗಳ ಕಾಲ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ವರ್ಷದ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿಗಳಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ಲೇನ್ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಭಾಗವಹಿಸಲಿದ್ದು, ಪದ್ಧತಿಯಂತೆ 21 ಗನ್ ಸೆಲ್ಯೂಟ್ ಮತ್ತು ಗಾರ್ಡ್ ಆಫ್ ಆನರ್ ಮೂಲಕ ಗೌರವಿಸಲ್ಪಡಲಿದ್ದಾರೆ.
ಪಥಸಂಚಲನದ ಪ್ರಮುಖ ಆಕರ್ಷಣೆಯಾಗಿ ಆಪರೇಷನ್ ಸಿಂಧೂರ ಮಿಷನ್ ಪ್ರದರ್ಶನಗೊಳ್ಳಲಿದೆ. ಇದೇ ಮೊದಲ ಬಾರಿಗೆ ಭಾರತೀಯ ಸೇನೆ ಬ್ಯಾಟಲ್ ಅರೇ (ಯುದ್ಧ ಶ್ರೇಣಿ) ಪ್ರದರ್ಶಿಸಲಿದೆ. ಈ ಸಂದರ್ಭದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು, ಟ್ಯಾಂಕ್ಗಳು, ಕ್ಷಿಪಣಿಗಳು, ಡ್ರೋನ್ಗಳು ಹಾಗೂ ವಿವಿಧ ಸೇನಾ ರಚನೆಗಳ ಪ್ರದರ್ಶನ ನಡೆಯಲಿದೆ. ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ಹಾರಾಟವೂ ಜನರ ಗಮನ ಸೆಳೆಯಲಿದೆ.
ಜೊತೆಗೆ ವಾಯುಪಡೆಯ ನಿವೃತ್ತ ಸೈನಿಕರ ವಿಶೇಷ ಟ್ಯಾಬ್ಲೋ ಕೂಡ ಪ್ರದರ್ಶಿಸಲಾಗುತ್ತದೆ.
ಈ ಬಾರಿ ಪಥಸಂಚಲನದಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಒಟ್ಟು 30 ಸ್ತಬ್ಧಚಿತ್ರಗಳು ಭಾಗವಹಿಸಲಿದ್ದು, ಭಾರತದ ಸಂಸ್ಕೃತಿ, ಪರಂಪರೆ, ನವೀನತೆ ಮತ್ತು ಸ್ವಾವಲಂಬನೆಯನ್ನು ಬಿಂಬಿಸಲಿವೆ. ಸುಮಾರು 2500 ಕಲಾವಿದರು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಕೆಂಪುಕೋಟೆಯಲ್ಲಿ ಭಾರತ ಪರ್ವ, ರಾಷ್ಟ್ರೀಯ ಶಾಲಾ ಬ್ಯಾಂಡ್ ಸ್ಪರ್ಧೆ, ಪ್ರಾಜೆಕ್ಟ್ ವೀರ್ ಗಾಥಾ 5.0 ಮತ್ತು ಪ್ರಧಾನಮಂತ್ರಿಯವರ ಎನ್ಸಿಸಿ ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.



