ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗದಗ ಜಿಲ್ಲೆಯ ಏಳು ತಾಲೂಕುಗಳಲ್ಲಿ ಅನೇಕ ಬೆಳೆಗಳು ಈಗಾಗಲೇ ಕಟಾವಿಗೆ ಬಂದಿದ್ದು, ಅವುಗಳನ್ನು ಜಿಲ್ಲಾಡಳಿತ ಸೂಕ್ತ ಬೆಂಬಲ ಬೆಲೆಯೊಂದಿಗೆ ತಕ್ಷಣ ಖರೀದಿ ಮಾಡಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ, ಕರ್ನಾಟಕ ಪ್ರದೇಶ ಸಂಘಟನೆಯವರು ಮನವಿ ಅರ್ಪಿಸಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ನರಗುಂದ ತಾಲೂಕಿನಲ್ಲಿ ಕಡಲೆ ಬೆಳೆ ಇನ್ನು 15-20 ದಿನಗಳಲ್ಲಿ ಕಟಾವಿಗೆ ಬರುತ್ತದೆ. ರೋಣ ಮತ್ತು ಗಜೇಂದ್ರಗಡ ತಾಲೂಕುಗಳಲ್ಲಿ ಕಡಲೆ ಮತ್ತು ಕುಸುಬಿ ಬೆಳೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಶಿರಹಟ್ಟಿ ಮತ್ತು ಲಕ್ಮೇಶ್ವರ ತಾಲೂಕಿನಲ್ಲಿ ಭತ್ತ, ಸೇಂಗಾ, ಕಡಲೆ ಮತ್ತು ಗದಗ ತಾಲೂಕಿನಲ್ಲಿ ಕಡಲೆ, ಕುಸುಬಿ ಇತ್ಯಾದಿಗಳನ್ನು ಬೆಳೆಯಲಾಗಿದೆ. ಈ ಎಲ್ಲ ಧಾನ್ಯಗಳ ಬೆಲೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ. ಆದ್ದರಿಂದ ತಾವು ತೀವ್ರ ಕಾಳಜಿ ವಹಿಸಿ ಸರಕಾರ ಘೋಷಿಸಿರುವ ಬೆಂಬಲ ಬೆಲೆಗಳಲ್ಲಿ ಧಾನ್ಯಗಳನ್ನು ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ರಾಜ್ಯಾಧ್ಯಕ್ಷ ಸಂಗನಗೌಡ ಪಾಟೀಲ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಲಕ್ಮೇಶ್ವರ ತಾಲೂಕಿನಲ್ಲಿ ಬೆಳೆಗಳಿಗೆ ಚಿಗರೆ ಹಾವಳಿ ವಿಪರೀತವಾಗಿದ್ದು, ರೈತರು ನಷ್ಟವನ್ನು ಅನುಭವಿಸಿದ್ದಾರೆ. ಈ ನಷ್ಟದ ಸಮೀಕ್ಷೆ ಮಾಡಿ ರೈತರಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಅರಣ್ಯ ಇಲಾಖೆಯವರ ಗಮನಕ್ಕೆ ಈ ವಿಷಯವನ್ನು ತಂದು ಚಿಗರೆ ಹಾವಳಿಯನ್ನು ನಿಯಂತ್ರಿಸಬೇಕೆಂದು ರೈತರು ಆಗ್ರಹಿಸಿದರು.
ಈ ಹಿಂದಿನ ಪ್ರತಿ ವರ್ಷದಲ್ಲಿಯೂ ಬೆಂಬಲ ಬೆಲೆಯಡಿಯಲ್ಲಿ ಧಾನ್ಯಗಳನ್ನು ತಡವಾಗಿ ಖರೀದಿ ಮಾಡುತ್ತಿರುವದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಈ ತೊಂದರೆಯನ್ನು ತಪ್ಪಿಸಬೇಕು. ಜಿಲ್ಲಾಡಳಿತವೇನಾದರೂ ಅಲಕ್ಷ್ಯ ಮಾಡಿದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಕೂರಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಜಿ, ಪ್ರಾಂತ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ಮಲ್ಲನಗೌಡ ಪಾಟೀಲ, ಜಗದೀಶ ಸಂಕನಗೌಡ್ರ, ಬಸನಗೌಡ ಪಾಟೀಲ, ರಮೇಶ ಕೋಳಿವಾಡ ಇನ್ನೂ ಮುಂತಾದ ರೈತರು ಉಪಸ್ಥಿತರಿದ್ದರು.