ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಮಗಾರ ಸಮಾಜದ ನಿವೇಶನ ರಹಿತರಿಗೆ ಆಶ್ರಯ ನಿವೇಶನ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಸಂಘದ ಜಿಲ್ಲಾಧ್ಯಕ್ಷ ಅನಿಲ ಮುಳಗುಂದ ನೇತೃತ್ವದಲ್ಲಿ ಸಮಾಜ ಬಾಂಧವರು ಬುಧವಾರ ಶಾಸಕರು, ತಹಸೀಲ್ದಾರರು ಮತ್ತು ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅನಿಲ ಮುಳಗುಂದ, ಲಕ್ಷ್ಮೇಶ್ವರ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮಗಾರ ಸಮಾಜದವರು ಸಣ್ಣಪುಟ್ಟ ವ್ಯಾಪಾರ-ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅನೇಕರಿಗೆ ಸ್ವಂತ ಮನೆಯಿಲ್ಲದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಂಥವರಿಗೆ ಆಶ್ರಯ ಯೋಜನೆಯಡಿ ನಿವೇಶನ ಕಲ್ಪಿಸಬೇಕು ಹಾಗೂ ಸಮಾಜದ ಜನರ ಕಾರ್ಯಗಳಿಗೆ ಸಮುದಾಯ ಭವನ ನಿರ್ಮಾಣಕ್ಕೂ ಜಾಗ ಕೊಡಬೇಕು ಎಂದು ಕೋರಿದರು.
ಮನವಿ ಪತ್ರ ಸ್ವೀಕರಿಸಿದ ಶಾಸಕ ಡಾ. ಚಂದ್ರು ಲಮಾಣಿ ಸಮಾಜದ ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಮುಖ್ಯಾಧಿಕಾರಿ ಮಾಂತೇಶ ಬೀಳಗಿ ಮನವಿ ಸ್ವೀಕರಿಸಿದರು. ಈ ವೇಳೆ ಕಲ್ಯಾಣ ವಿವಿಧೋದ್ದೇಶ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಲಕ್ಷ್ಮಿಬಾಯಿ ಟಾಕಪ್ಪ ಸಾತಪುತೆ, ಕಾರ್ಯದರ್ಶಿ ಲತಾ ಎಸ್. ಹಂಜಗಿ, ಟಾಕಪ್ಪ ಸಾತಪುತೆ, ಮಂಜುನಾಥ ಹಂಜಗಿ, ಪರಶುರಾಮ ಸಾತಪುತೆ, ಅನುರಾಜ ಹಂಜಗಿ ಸೇರಿ ಹಲವರಿದ್ದರು.



