ವಿಜಯಸಾಕ್ಷಿ ಸುದ್ದಿ, ಗದಗ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ, ರಾಜ್ಯ ಸರ್ಕಾರದ ನಿಶ್ಚಿತ ಮಾಸಿಕ ಗೌರವಧನ ಹಾಗೂ ಪ್ರಣಾಳಿಕೆಯ ಭರವಸೆಯ ಮೊತ್ತ ಒಟ್ಟುಗೂಡಿಸಿ ೧೫ ಸಾವಿರ ರೂ ಮಾಸಿಕ ನಿಶ್ಚಿತ ಗೌರವಧನ ನೀಡಬೇಕು ಎನ್ನುವ ಬಹುದಿನಗಳ ಬೇಡಿಕೆಯೂ ಸೇರಿದಂತೆ ಇನ್ನಿತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಕೆಗೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಬೇಕೆಂದು ಕೋರಿ ಆಶಾ ಕಾರ್ಯಕರ್ತೆಯರು ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿದರು.
ಹಗಲಿರುಳು ಬಡಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಿಕೊಡಲು ಆರೋಗ್ಯ ಇಲಾಖೆಯಲ್ಲಿ ಪರಿಶ್ರಮಿಸುತ್ತಿದ್ದೇವೆ. ರಾಜ್ಯದಲ್ಲಿ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ಮಹತ್ತರವಾದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ಆಶಾ ಕಾರ್ಯಕರ್ತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಸಮಸ್ಯೆಗಳ ಕುರಿತು ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ಕಳೆದ 8 ವರ್ಷಗಳಿಂದ ದೂರುಗಳನ್ನು ಸಲ್ಲಿಸಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಡಿಸೆಂಬರ್ 9ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚಿಸಿ ಸರ್ಕಾರದ ಗಮನ ಸೆಳೆದು ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಆಗ್ರಹಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಆಶಾ ಸಂಘದ ಜಿಲ್ಲಾ ಅಧ್ಯಕ್ಷೆ ಭಾಗ್ಯಜ್ಯೋತಿ ಹಡಪದ, ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀ ಪೂಜಾರ್, ಜಿಲ್ಲಾ ಉಪಾಧ್ಯಕ್ಷೆ ಪ್ರೇಮ ಪಾಟೀಲ್, ಅನ್ನಪೂರ್ಣ ಕಟವ, ಜಿಲ್ಲಾ ಸಮಿತಿ ಸದಸ್ಯರಾದ ಬಸವಣ್ಣೆಮ್ಮಾ ಓಲೇಕಾರ್, ಗೌರಿ, ಶಾಹೀನ, ಗೀತ ಭಜಂತ್ರಿ ಸೇರಿದಂತೆ ಆಶಾ ಕಾರ್ಯಕರ್ತೆಯರಿದ್ದರು.