ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ಥಿಗೆ ಆಗ್ರಹಿಸಿ ಸಾರ್ವಜನಿಕರು, ಸಂಘಟನೆಯವರು ಹೋರಾಟ ನಡೆಸಿ ಮನವಿ ಸಲ್ಲಿಸಿದ್ದಾಗಿದೆ. ಇದೀಗ, ಹಾಳಾದ ರಸ್ತೆಯಲ್ಲಿ ವಾಹನ ಚಲಾಯಿಸುವ ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು, ಸಿಬ್ಬಂದಿ, ಚಾಲಕ-ನಿರ್ವಾಹಕರೂ ಸಹ ರಸ್ತೆ ದುರಸ್ಥಿಗಾಗಿ ತಮ್ಮ ಮನವಿಯನ್ನು ಬುಧವಾರ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ ಲಕ್ಷ್ಮೇಶ್ವರ ಘಟಕದ ವ್ಯಾಪ್ತಿಗೆ ಬರುವ ಬಹುತೇಕ ರಸ್ತೆಯಲ್ಲಿ ದೊಡ್ಡ ಪ್ರಮಾಣದ ತಗ್ಗು ಗುಂಡಿಗಳುಂಟಾಗಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ರಸ್ತೆಯಲ್ಲಿ ನಿತ್ಯ ವಾಹನ ಚಲಾಯಿಸುವುದು ಹರಸಾಹಸವೇ ಆಗಿದೆ. ಚಾಲಕರು ಅನಾರೋಗ್ಯಕ್ಕೊಳಗಾಗುತ್ತಿದ್ದು ಪ್ರಯಾಣಿಕರೂ ಸಮಸ್ಯೆಗೊಳಗಾಗುತ್ತಿದ್ದಾರೆ.
ಬಸ್ಸುಗಳು ರಸ್ತೆ ಮಾರ್ಗದಲ್ಲಿಯೇ ಕೆಟ್ಟು ನಿಲ್ಲುವಂತಾಗಿವೆ. ಸರಿಯಾದ ಸಮಯಕ್ಕೆ ಮಾರ್ಗ ತಲುಪಲಾಗುತ್ತಿಲ್ಲ ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹದಗೆಟ್ಟ ರಸ್ತೆಗಳನ್ನು ವಾರದೊಳಗಾಗಿ ದುರಸ್ಥಿಗೊಳಿಸುವಂತೆ ಮನವಿ ಸಲ್ಲಿಸಿದರು.
ಶಾಸಕ ಡಾ, ಚಂದ್ರು ಲಮಾಣಿ ಮನವಿ ಸ್ವೀಕರಿಸಿ, ರಸ್ತೆಗಳ ಸ್ಥಿತಿ-ಗತಿಗಳ ಬಗ್ಗೆ ತಮಗೆ ಸಂಪೂರ್ಣ ಅರಿವಿದೆ. ಕ್ಷೇತ್ರ ವ್ಯಾಪ್ತಿಯಲ್ಲಿನ ರಸ್ತೆಗಳ ಸುಧಾರಣೆಗೆ ಅನೇಕ ಬಾರಿ ಸರಕಾರದ ಗಮನ ಸೆಳೆದಿದ್ದೇನೆ. ಸರಕಾರಿಂದ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗುತ್ತಿಲ್ಲ. ಗುಂಡಿ ಮುಚ್ಚಲಾದರೂ ಅನುದಾನ ಕಲ್ಪಿಸಲು ಕೋರಿದ್ದೇನೆ. ಯಾವುದೇ ಕಾರಣಕ್ಕೂ ಮಾರ್ಗದ ಬಸ್ಸುಗಳನ್ನು ನಿಲ್ಲಿಸದಂತೆ ಸೂಚಿಸಿದರು.
ಈ ವೇಳೆ ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಶೋಭಾ ಪಾಟೀಲ, ಬೊಮ್ಮನಕಟ್ಟಿ, ಡಿ.ಎಸ್. ಹಿರೇಮಠ, ಫಕ್ಕೀರಯ್ಯ ನರಗುಂದಮಠ, ಅಂಬರೀಶ ಗುಡಗುಂಟಿ, ಹನುಮಂತ ಮ್ಯಾಟಣ್ಣವರ, ರಮೇಶ ಕೆರೆಕೊಪ್ಪ, ಡಿ.ಎಚ್. ಸೊರಟೂರ, ಬಸವರಾಜ ಕಿತ್ಲಿ, ಬಸ್ ಡಿಪೋ ಘಟಕದ ಚಾಲಕರು ನಿರ್ವಾಹಕರು, ಸಿಬ್ಬಂದಿಗಳು ಇದ್ದರು.