ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಬಸಣ್ಣ ಬೆಂಡಿಗೇರಿ ಅವರ ಹೊಲದಿಂದ ಜಂಗಳಕೇರಿ (ಸೂರಣಗಿ)ಯವರೆಗೆ ಇರುವ ರಸ್ತೆ ಹದಗೆಟ್ಟಿದ್ದು, ನಮ್ಮ ಹೊಲ-ನಮ್ಮ ರಸ್ತೆ ಯೋಜನೆಯಲ್ಲಿ ಈ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಶಾಸಕ ಡಾ.ಚಂದ್ರು ಲಮಾಣಿಯವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಮಾಲತೇಶ ಪಾಟೀಲ, ಈ ಹೊಲಗಳಿಂದ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣವಾದಲ್ಲಿ ಮುನಿಯನ್ ತಾಂಡಾ, ಉಂಡೆನಹಳ್ಳಿ ಗ್ರಾಮಗಳ ರೈತರ ಹೊಲಗಳಿಗೆ ಸಂಪರ್ಕವು ಹತ್ತಿರವಾಗುತ್ತದೆ. ರೈತರು ಬೆಳೆದ ಬೆಳೆಗಳನ್ನು ತರಲು ಸಹ ಈ ರಸ್ತೆಯಲ್ಲಿ ಅಸಾಧ್ಯವಾಗಿದ್ದು, ಕೂಡಲೇ ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಅನೂಕೂಲ ಮಾಡಿಕೊಡುವಂತೆ ಶಾಸಕರಿಗೆ ಮನವಿ ಅರ್ಪಿಸುವದಾಗಿ ಹೇಳಿದರು. ಮನವಿ ಸ್ವೀಕರಿಸಿದ ಶಾಸಕರು ರೈತರ ಸಮಸ್ಯೆಗಳ ಬಗ್ಗೆ ನಮಗೆ ಅರಿವು ಇದ್ದು, ಸರಕಾರದಿಂದ ಅನುದಾನ ಬಂದ ತಕ್ಷಣ ಈ ಕಾರ್ಯವನ್ನು ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ತಾಲೂಕಾ ಕಾರ್ಯದರ್ಶಿ ಶಿವಲಿಂಗಪ್ಪ ಕಟಗಿ, ಅಜಯ್ ಕರಿಗೌಡ, ಸೋಮೇಶ್ವರ ಓದಣ್ಣವರ್, ಎಂ.ಯು. ಸಿದ್ದಿ, ಟಾಕಪ್ಪ ಸಾತಪುತೆ, ರಾಮಪ್ಪ ಗೌರಿ ಸೇರಿದಂತೆ ಅನೇಕರಿದ್ದರು.