ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿಯ ಶ್ರೀ ಎಸ್.ಎಂ. ಡಬಾಲಿ ತಾಲೂಕಾ ಕ್ರೀಡಾಂಗಣಕ್ಕೆ ಮೂಲಭೂತ ಸೌಲಭ್ಯ ಹಾಗೂ ಕ್ರೀಡಾ ಪರಿಕರಗಳನ್ನು ಪೂರೈಸುವಂತೆ ಆಗ್ರಹಿಸಿ ಬುಧವಾರ ಶಿರಹಟ್ಟಿಯಲ್ಲಿ ಕರ್ನಾಟಕ ಪ್ರಜಾಪರ ವೇದಿಕೆ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ಹಸನ ತಹಸೀಲ್ದಾರ, ಶಿರಹಟ್ಟಿ ತಾಲೂಕಾ ಕ್ರೀಡಾಂಗಣಕ್ಕೆ ಪ್ರತಿದಿನ ಸುಮಾರು 100ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ ನಾಗರಿಕರು ಆಗಮಿಸುತ್ತಾರೆ. ಆದರೆ ಕ್ರೀಡಾಂಗಣದಲ್ಲಿ ದಾಹವನ್ನು ತಣಿಸಲು ಶುದ್ಧ ಕುಡಿಯುವ ನೀರಿನ ಸೌಲಭ್ಯ ಇಲ್ಲ, ಶೌಚಾಲಯದ ಕೊರತೆಯೂ ಇದೆ. ಪಟ್ಟಣದಲ್ಲಿ ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳಿದ್ದು, ಅವರಿಗೆ ಸಮರ್ಪಕವಾಗಿ ಕ್ರೀಡಾ ಪರಿಕರಗಳು ಇಲ್ಲದ್ದರಿಂದ ಬಡ ಕುಟುಂಬದ ಕ್ರೀಡಾಪಟುಗಳಿಗೆ ಸಮಸ್ಯೆಯಾಗುತ್ತಿದೆ.
ಭಾರತೀಯ ಸೇನೆ, ಪೊಲೀಸ್, ಅಬಕಾರಿ, ರೈಲ್ವೆ ಸೇರಿದಂತೆ ವಿವಿಧ ನೇಮಕಾತಿಗೆ, ದೈಹಿಕ ಸಾಮರ್ಥ್ಯ ತಯಾರಿಗೆ ಪ್ರತಿದಿನ ಸ್ಪರ್ಧಾರ್ಥಿಗಳು ಕ್ರೀಡಾಂಗಣಕ್ಕೆ ಬರುತ್ತಾರೆ. ಅವರಿಗೆ ಸರಿಯಾದ ಪರಿಕರಗಳ ವ್ಯವಸ್ಥೆ ಇಲ್ಲದೇ ಇರುವುದರಿಂದ ತೊಂದರೆಯಾಗುತ್ತಿದೆ. ಕೂಡಲೇ ಕ್ರೀಡಾಂಗಣಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿ ಕ್ರೀಡಾಪಟುಗಳಿಗೆ ಕ್ರೀಡಾ ಪರಿಕರಗಳನ್ನು ಪೂರೈಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶರೀಫ ಗುಡಿಮನಿ, ಹಾಲಪ್ಪ ಬಡೆಣ್ಣವರ, ವೀರೇಶ ಭೋರಶೆಟ್ಟರ, ಬಸವರಾಜ ಗುಡಿಮನಿ, ಕಳಕಪ್ಪ ಬಿಸನಳ್ಳಿ, ಗಾಳೆಪ್ಪ ಮರ್ಚಣ್ಣವರ ಉಪಸ್ಥಿತರಿದ್ದರು.