ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರೈತರ ಜಮೀನುಗಳು, ಮಠಮಾನ್ಯಗಳು, ಸಾರ್ವಜನಿಕ ಆಸ್ತಿಗಳ ಪಹಣಿಯಲ್ಲಿ ನಮೂದಾದ ವಕ್ಫ್ ಹೆಸರು ತೆಗೆದು ಹಾಕುವಂತೆ ಲಕ್ಷ್ಮೇಶ್ವರ ತಾಲೂಕು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದಿಂದ ಮಂಗಳವಾರ ತಹಸೀಲ್ದಾರ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ, ಪೂರ್ವಜರ ಕಾಲದಿಂದಲೂ ಕೃಷಿ ಮಾಡುತ್ತಾ ಬಂದಿರುವ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ನ ಹೆಸರು ನಮೂದಾಗಿದ್ದು, ಯಾವುದೇ ತಪ್ಪು ಮಾಡದ ರೈತರು ಕೋರ್ಟ್ಗೆ ಅಲೆಯುವಂತಾಗಿದೆ.
ಇದರಿಂದ ರೈತರಿಗೆ ಬೆಳೆವಿಮೆ, ಬೆಳೆಹಾನಿ, ಬೆಳೆಸಾಲ ಸೇರಿದಂತೆ ಯಾವುದೇ ಸರಕಾರಿ ಯೋಜನೆಗಳು ಸಿಗದೇ ವಂಚಿತರಾಗಿದ್ದೇವೆ. ವಕ್ಫ್ ಅನ್ಯಾಯದಿಂದ ರೈತರು ಹಾಗೂ ಸಾರ್ವಜನಿಕರು ತತ್ತರಿಸಿ ಹೋಗಿದ್ದು ಆತ್ಮಹತ್ಯೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ರೈತರ, ಸಾರ್ವಜನಿಕರ, ಮಠಮಾನ್ಯಗಳ ದಾಖಲೆಯಲ್ಲಿ ನಮೂದಾದ ವಕ್ಫ್ ಬೋರ್ಡಿನ ಹೆಸರನ್ನು ತೆಗೆದು ಹಾಕಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ಅಜೇಯ ಕರಿಗೌಡ್ರ, ಉಪಾಧ್ಯಕ್ಷ ಟಾಕಪ್ಪ ಸಾತಪುತೆ, ಗಂಗಾಧರ ಬಂಕಾಫುರ, ಸುರೇಶ ಬಾಘಲದ, ವಸಂತಗೌಡ ಕರೆಗೌಡ್ರ, ಬಸಪ್ಪ ದೊಡ್ಡಗಣ್ಣವರ, ಬಸವರಾಜ ಮೂಲಿಮನಿ, ಎಸ್.ಎಂ. ಪಾಟೀಲ, ಚಂದ್ರಗೌಡ ಕರೆಗೌಡ್ರ, ಮಹೇಶ ಅಂದಲಗಿ, ಸೋಮಪ್ಪ ಮಜ್ಜಿಗುಡ್ಡದ, ಬಸವರಾಜ ಕೋಡಳ್ಳಿ, ಮಾಂತೇಶ ಲಿಂಗಶೆಟ್ಟಿ, ಸೋಮು ಜಬಡಿ, ಸುರೇಶ ಗೋಡಿ ಮುಂತಾದವರಿದ್ದರು.