ವಿಜಯಸಾಕ್ಷಿ ಸುದ್ದಿ, ಗದಗ: ವಾ.ಕ.ರ.ಸಾ ಸಂಸ್ಥೆಯ ಗದಗ ವಿಭಾಗದ ಚಾಲನಾ ಸಿಬ್ಬಂದಿಗಳ ಮೇಲೆ ಆಗುತ್ತಿರುವ ಹಲ್ಲೆಗಳಿಂದ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಸಂಸ್ಥೆಯ ವಿವಿಧ ಕಾರ್ಮಿಕ ಸಂಘಟನೆಗಳಿಂದ ಗದಗ ಪೊಲೀಸ್ ಇಲಾಖೆಯ ಡಿಎಸ್ಪಿ ಮೂಲಕ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಗದಗ ಮುಳಗುಂದ ನಾಕಾ ಬಳಿ ಇರುವ ಸಂಸ್ಥೆಯ ವಿಭಾಗೀಯ ಕಚೇರಿಯ ಮುಂದೆ ಸೇರಿದ ಕಾರ್ಮಿಕ ಸಂಘಟನೆಯ ಮುಖಂಡರು ಘೋಷಣೆಯೊಂದಿಗೆ ಡಿಎಸ್ಪಿ ಕಾರ್ಯಾಲಯದವರೆಗೆ ಪಾದಯಾತ್ರೆ ಕೈಗೊಂಡು ಮನವಿ ಸಲ್ಲಿಸಿದರು.
ವಾ.ಕ.ರ.ಸಾ ಸಂಸ್ಥೆಯ ಗದಗ ವಿಭಾಗದ ಸಿಬ್ಬಂದಿಗಳು ಕರ್ನಾಟಕ ಸರಕಾರ ಅಗತ್ಯ ಸೇವಾ ಕಾಯ್ದೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು, ಅದರಲ್ಲೂ ವಿಶೇಷವಾಗಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್, ಡಿ ಕಮ್ ಸಿ ಹಗಲು-ರಾತ್ರಿ ಎನ್ನದೇ ದಿನದ 24 ಗಂಟೆಯೂ ಸಾರ್ವಜನಿಕರಿಗೆ ಪ್ರಯಾಣದ ಸೇವೆ ಒದಗಿಸುತ್ತಿದ್ದಾರೆ.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಡ್ರೈವರ್, ಕಂಡಕ್ಟರ್‌ಗಳು ಶ್ರಮಿಸುತ್ತಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ದಟ್ಟಣೆ, ಗದ್ದಲ ಹೆಚ್ಚಾಗುತ್ತಿದೆ. ಸ್ಟೇಜ್ ದಾಟುವುದರೊಳಗೆ ದಾರಿ ಚೀಟಿ ನೀಡಬೇಕಾದ ನಿಯಮ ಇರುವುದರಿಂದ ದಾರಿ ಚೀಟಿ ನೀಡಲು ಬಸ್ ನಿಲ್ಲಿಸುತ್ತಿದ್ದಂತೆಯೆ ಪ್ರಯಾಣಿಕರು ಡ್ರೈವರ್ -ಕಂಡಕ್ಟರ್ ಮೇಲೆ ಸಿಟ್ಟಾಗುವದು, ಬೈದಾಡುವದು ಅಷ್ಟೇ ಅಲ್ಲದೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸುವಂತಹ ಕೃತ್ಯ ನಡೆಸುತ್ತಿರುವುದು ಕಳವಳಕಾರಿ ಘಟನೆಯಾಗಿದೆ.
ಒಂದು ವೇಳೆ ಸ್ಟೇಜ್ ದಾಟಿದರೆ ತನಿಖೆಯ ಅಧಿಕಾರಿಗಳು ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಸ್ಪೆಂಡ್ ಮಾಡುವ ಸಂಭವ ಇರುವುದರಿಂದ ನೌಕರಿ ಮಾಡುವುದೇ ಕಷ್ಟವಾಗಿದೆ. ಕಾರಣ ಈ ಕುರಿತು ಸಂಸ್ಥೆಯ ನೌಕರರ, ಸಿಬ್ಬಂದಿಯ ಮೇಲೆ ಆಗುತ್ತಿರುವ, ಆಗಬಹುದಾದ ಹಲ್ಲೆಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಂಡು ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ವಿವರಿಸಿದರು.
ಮನವಿ ಸ್ವೀಕರಿಸಿದ ಪ್ರಭಾರ ಡಿಎಸ್ಪಿ ಮಹಾಂತೇಶ ಸಜ್ಜನ, ಮನವಿಯನ್ನು ಸೂಕ್ತ ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳಿಗೆ ತಲುಪಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಶಾಂತಣ್ಣ ಮುಳವಾಡ, ನಾಗರಾಜ ಬಳ್ಳಾರಿ, ಎಸ್.ಎಫ್. ಸಂಗಣ್ಣವರ, ಸಂತೋಷ ಕುಲಕರ್ಣಿ, ಗೋಪಾಲ ರಾಯರು, ಎಂ.ಎಚ್. ಪೂಜಾರ, ಎಫ್.ಎಚ್. ಗೌಡರ, ಎ.ಜಿ. ಸುಂಕದ, ಬಿ.ಎಚ್. ರಾಮೇನಹಳ್ಳಿ, ಎಚ್.ಸಿ. ಕೊಪ್ಪಳ, ಎಂ.ಆAಜನೇಯ, ಎಸ್.ಕೆ. ಭಜಂತ್ರಿ, ಎಸ್.ಕೆ. ಅಯ್ಯನಗೌಡರ, ಎ.ಕೆ. ಕರ್ನಾಚಿ, ಜಿ.ಆರ್. ಆದಿ, ಆಂಜನೇಯ ಕುಂಬಾರ, ಲಕ್ಮೀ ಸಾಲಮನಿ, ವಿದ್ಯಾ ಮೇಘರಾಜ, ವೀಣಾ ಚವ್ಹಾಣ, ಜೆ.ಜೆ. ಪಠಾಣ, ಸಿದ್ಧಪ್ಪ ಗದಗಿನ, ಮಲ್ಲಪ್ಪ ಅವ್ವಣ್ಣವರ, ಅಶೋಕ ಸಂಗಟಿ, ಕೆಂಚಪ್ಪ ಡೊಳ್ಳಿನ, ಈರಣ್ಣ ಜವಳಿ, ಬಸವರಡ್ಡಿ, ವ್ಹಿ.ವ್ಹಿ. ಗೋದಿ ಮುಂತಾದವರು ಪಾಲ್ಗೊಂಡಿದ್ದರು.