ವಿಜಯಸಾಕ್ಷಿ ಸುದ್ದಿ, ಗದಗ: 2014ರಲ್ಲಿ ಸುಪ್ರೀಂಕೋರ್ಟ್ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ. 1ರಷ್ಟು ಮೀಸಲಾತಿಯನ್ನು ಘೋಷಣೆ ಮಾಡಿತ್ತು. ಆದರೆ, ಇದು ಕೇವಲ ಹೆಸರಿಗಷ್ಟೇ ಉಳಿದುಕೊಂಡಿದೆ ಹೊರತು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಲಿಂಗತ್ವ ಅಲ್ಪಸಂಖ್ಯಾತರು ಪ್ರತಿದಿನ ಸಮಾಜದಲ್ಲಿ ಅನೇಕ ಕಷ್ಟಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉಮಾ ಪಿ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ತಮ್ಮ ಅಸಮಾಧಾನ ಹೊರ ಹಾಕಿದರು.
ಕರ್ನಾಟಕ ಸರ್ಕಾರವು ಎಲ್ಲಾ ಇಲಾಖೆಗಳಲ್ಲಿಯೂ ಟ್ರಾನ್ಸ್ಜೆಂಡರ್ ವ್ಯಕ್ತಿಗಳಿಗಾಗಿ ಶೇ. 1 ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು. ಹೆಚ್ಚಾಗಿ ನೇಮಕಾತಿ ಮತ್ತು ಆಯ್ಕೆ ಪ್ರಕ್ರಿಯೆಯು ಪಾರದರ್ಶಕತೆಯುಳ್ಳದ್ದು ಮತ್ತು ಒಳಗೊಳ್ಳುವಿಕೆಯನ್ನು ಖಚಿತಪಡಿಸುವಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕು. ಜೊತೆಗೆ ಕರ್ನಾಟಕದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಸೇವೆಗಳನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.
ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಸುಲಭವಾಗಿ, ಉಚಿತವಾಗಿ ಮತ್ತು ಲಭ್ಯವಿರುವ ಆರೈಕೆಯನ್ನು ಖಚಿತಪಡಿಸಬೇಕು. ಕರ್ನಾಟಕ ಸರ್ಕಾರದ ಆರೋಗ್ಯದ ಮತ್ತು ಮಾನಸಿಕ ಆರೋಗ್ಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳ ಕುರಿತು ಅರಿವು ಮೂಡಿಸುವಂತಹ ಕೆಲಸವಾಗಬೇಕು ಹಾಗೂ ಕಳಂಕ ಮತ್ತು ತಾರತಮ್ಯ ರಹಿತ ಸೇವೆಗಳು ಸಿಗುವಂತಾಗಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಇಲಾಖೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ವಿಷಯವಾಗಿ ಅರಿವು ಮೂಡಿಸುವುದು ಹಾಗೂ ವೈದ್ಯಕೀಯ ಮತ್ತು ಶಿಕ್ಷಣ ಪಠ್ಯಕ್ರಮಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ವಿಷಯಗಳನ್ನು ಸೇರಿಸಬೇಕು. ಕರ್ನಾಟಕ ರಾಜ್ಯ ಸರ್ಕಾರವು ತಕ್ಷಣವೇ ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯ ಕಲ್ಯಾಣ ಮಂಡಳಿ ನಿಗಮವನ್ನು ಸ್ಥಾಪಿಸಿ ನಮ್ಮ ಹಿತ ಕಾಪಾಡಬೇಕಿದೆ ಎಂದರು.
ಈ ವೇಳೆ ಆದಿತ್ಯ, ಆರೀಫ್, ಸಿರಾಜ್ ಲಕ್ಕುಂಡಿ ಉಪಸ್ಥಿತರಿದ್ದರು.
ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಕುಟುಂಬದಿAದ ದೂರವಿದ್ದು, ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಇದರಿಂದ ಕರ್ನಾಟಕ ಸರ್ಕಾರ ವಸತಿ ಮತ್ತು ಜಾಗಗಳನ್ನು ನೀಡುವ ಯೋಜನೆಗಳ ಅಡಿಯಲ್ಲಿ ವಸತಿ ಮತ್ತು ಖಾಲಿಸ್ಥಳ ಹಂಚಿಕೆ ಮಾಡುವ ಮೂಲಕ ಕ್ರಮ ಕೈಗೊಳ್ಳುಬೇಕು ಎಂದು ಉಮಾ ಪಿ ಸರ್ಕಾರಕ್ಕೆ ಮನವಿ ಮಾಡಿದರು.