ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯದಲ್ಲಿ ಪ್ರಾರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಕಾರ್ಯವು ಸರಿಯಾಗಿ ಆಗದೆ ಜನರಿಂದ ನಗೆಪಾಟಲಿಗೆ ಈಡಾಗುತ್ತಿದ್ದು, ಕೂಡಲೇ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು, ಇಲ್ಲವೆ ಸಮಸ್ಯೆ ಬಗೆಹರಿಯುವವರೆಗೂ ಗಣತಿ ಕಾರ್ಯವನ್ನು ಮುಂದೂಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದವರು ಗುರುವಾರ ತಹಸೀಲ್ದಾರಿಗೆ ಮನವಿ ಸಲ್ಲಿಸಿದರು.
ಪ್ರತಿ ಮನೆಗೂ ಲೊಕೇಷನ್ ಹಾಕಿಕೊಂಡು ಹುಡುಕುವುದು ಕಷ್ಟವಾಗುತ್ತಿದೆ. ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಆ್ಯಪ್‌ನಲ್ಲಿ ತುಂಬುವುದು ಸಹ ಕಷ್ಟವಾಗುತ್ತಿದೆ. ಓರ್ವ ಶಿಕ್ಷಕರಿಗೆ 150-175 ಮನೆಗಳನ್ನು ನೀಡಲಾಗಿದ್ದು, ತಾಂತ್ರಿಕ ಸಮಸ್ಯೆ ಹೀಗೇ ಇದ್ದರೆ ಕನಿಷ್ಠ 1-2 ತಿಂಗಳು ಬೇಕಾಗುತ್ತದೆ. ಅಲ್ಲದೆ ಡಾಟಾ ಸಹ ಹೆಚ್ಚು ಬೇಕಾಗುತ್ತಿದ್ದು, ಲೊಕೇಷನ್ ಮ್ಯಾಪ್ ನೀಡಿ ಹುಡುಕುವ ಬದಲು ಮತಗಟ್ಟೆ ಲಿಸ್ಟ್ ನೀಡಿ ಸಮೀಕ್ಷೆ ನಡೆಸಲು ಸೂಚಿಸಿದರೆ ಸುಲಭವಾಗುತ್ತಿತ್ತು ಎಂದು ಶಿಕ್ಷಕರು ಮನವಿಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಎಲ್ಲ ತಾಂತ್ರಿಕ ಸಮಸ್ಯೆಗಳು ಬಗೆಹರಿಯುವವರೆಗೆ ಸಮೀಕ್ಷೆ ಮುಂದೂಡಿ ದಸರಾ ಹಬ್ಬವನ್ನು ಆಚರಿಸಲು ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಆರೋಗ್ಯ ಸಮಸ್ಯೆ, ವಿಕಲಚೇತನರಿಗೆ ಹಾಗೂ ನಿವೃತ್ತಿಯ ಅಂಚಿನಲ್ಲಿರುವವರಿಗೆ ವಿನಾಯತಿ ನೀಡಬೇಕೆಂದು ಮನವಿ ಸಲ್ಲಿಸಿದರು.
ಕ.ರಾ.ಸ. ನೌ. ಸಂಘದ ತಾಲೂಕಾಧ್ಯಕ್ಷ ಗುರುರಾಜ ಹವಳದ, ಎಮ್.ಎ. ನದಾಫ್, ಎಮ್.ಡಿ. ವಾರದ, ಬಿ.ಎಮ್. ಯರಗುಪ್ಪಿ, ಪ್ರಶಾಂತ ಸನದಿ, ಎಮ್.ಎಸ್. ಹಿರೇಮಠ, ಎಲ್.ಎನ್. ನಂದೆಣ್ಣವರ, ಡಿ.ಡಿ. ಲಮಾಣಿ, ಗೀತಾ ಹಳ್ಯಾಳ, ಎಚ್.ಡಿ. ನಿಂಗರಡ್ಡಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಶಿಕ್ಷಕರು, ನೌಕರರು ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಸಮೀಕ್ಷೆಗೆ ನೀಡಲಾಗುವ ಹೊಸ ವರ್ಷನ್ ಅಪ್ಲಿಕೇಶನ್ ಕಾರ್ಯ ನಿರ್ವಹಿಸದಿರುವುದು, ನಿಯೋಜಿಸಿರುವ ಮನೆಗಳ ಲೊಕೇಶನ್ ಸಿಗದೇ ಇರುವುದು, ನಿಗದಿಪಡಿಸಿರುವ ಮನೆಗಳು ಒಂದೇ ಕಡೆ ಇಲ್ಲದಿರುವುದು, ಮನೆ ಸಮೀಕ್ಷೆ ಮಾಡಿದ ನಂತರ ಸಬ್ಮಿಟ್ ಆಗದೇ ಇರುವುದು, ಓಟಿಪಿ ಸಮಸ್ಯೆ ಹೀಗೆ ಹತ್ತು ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಾಮಾಜಿಕ ಮತ್ತು ಆರ್ಥಿಕ ಗಣತಿಯ ಎಲ್ಲ ಸಮಸ್ಯೆಗಳನ್ನು ಪರಿಹರಿಸುವವರೆಗೂ ಮುಂದೂಡುವಂತೆ ಮನವಿ ಮಾಡಿದರು.



