ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಗಂಗಿಮಡಿಯ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗಳಿಗೆ ಎಂ.ಜಿ. ಚಾರಿಟೇಬಲ್ ಟ್ರಸ್ಟ್, ಹಾಗೂ ಅಬುಹುರೇರಾ ಮಸ್ಜಿದ್ ವತಿಯಿಂದ 5, 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಮೌಲಾನಾ ಅಬ್ದುಲಗಪೂರಸಾಬ ಪಲ್ಲೇದ ಮಾತನಾಡಿ, ಶಿಕ್ಷಣವೆಂಬುದು ಬಹು ಮಹತ್ವವಾದ ಹಾಗೂ ಜೀವನವನ್ನು ರೂಪಿಸಿಕೊಳ್ಳಲು ಅಗತ್ಯವಾದ ಸಾಧನ. ಎಷ್ಟೇ ಸಿರಿವಂತಿಕೆ, ಆಸ್ತಿ, ಹಣ ಇದ್ದರೂ ಕೂಡ ಸಿಗದೇ ಇರುವ ಒಂದು ಗೌರವ ಶಿಕ್ಷಣದಿಂದ ಮಾತ್ರ ಪಡೆಯಲು ಸಾಧ್ಯ ಎಂದರು.
ಶಹರ ವಲಯದ ಬಿಆರ್‌ಪಿ ಎಂ.ಎ. ಯರಗುಡಿ ಮಾತನಾಡುತ್ತಾ, ಶಾಲೆಯಲ್ಲಿ ಪ್ರತಿ ಮಗುವೂ ಓದು-ಬರಹ ಹಾಗೂ ಕನಿಷ್ಠ 30ರವರೆಗೆ ಮಗ್ಗಿಗಳನ್ನು ಹೇಳುವುದನ್ನು ರೂಢಿ ಮಾಡಿಕೊಳ್ಳಬೇಕು. ಮುಂದೆ ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿಗಳು ಪ್ರತಿದಿನ ಸ್ಪಷ್ಟ ಹಾಗೂ ಶುದ್ಧವಾಗಿ ಎರಡು ಪುಟಗಳನ್ನು ಬರೆಯುವ ರೂಢಿ ಮಾಡಿಕೊಳ್ಳಬೇಕು. ಅದಕ್ಕಾಗಿ ತಮಗೆ ಈ ನೋಟ್ ಪುಸ್ತಕಗಳನ್ನು ಕೊಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಿಆರ್‌ಪಿ ಶಿಲ್ಪಾ ಹಳ್ಳಿಕೇರಿ ಮಾತನಾಡುತ್ತಾ, ಇಲಾಖೆಯ ಆಶಯದಂತೆ ಸರಕಾರವು ನೀಡುವ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಚೆನ್ನಾಗಿ ಓದಬೇಕು. ಶಾಲೆಯಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು ಭವಿಷ್ಯ ನಿರ್ಮಾಣ ಮಾಡಿಕೊಳ್ಳುವುದರ ಕಡೆಗೆ ಗಮನ ಕೊಡಬೇಕು ಎಂದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಆರ್.ಬಿ. ಸಂಕಣ್ಣವರ, ಸೈನಾಜ ಚಾಹುಸೇನ್ ಮಾತನಾಡಿದರು. ವೇದಿಕೆಯ ಮೇಲೆ ಟ್ರಸ್ಟ್ನ ಅಧ್ಯಕ್ಷ ಮಕ್ತುಮಸಾಬ ನಾಯಕ, ಅಬುಹುರೇರಾ ಮಸೀದಿಯ ಅಧ್ಯಕ್ಷರಾದ ಚಾಂದಸಾಬ ಅಬ್ಬಿಗೇರಿ, ಕಾರ್ಯದರ್ಶಿ ಮಹಮ್ಮದಸಾಬ ಬೋದ್ಲೆಖಾನ, ಖಜಾಂಚಿ ಮೈನುದ್ದಿನ್ ಗುಜಮಾಗಡಿ, ಮೋದಿನಸಾಬ ಕನಕವಾಡ, ಮಹಮ್ಮದ ರಫೀಕ ಬಾಗಲಕೋಟ, ಖಾನಸಾಬ ಗುಜ್ಮಾಗಡಿ ಮುಂತಾದವರಿದ್ದರು.