ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಲು ಲಕ್ಕುಂಡಿ ಗ್ರಾಮ ಪಂಚಾಯಿತಿಯು ಇತ್ತೀಚೆಗೆ ಗ್ರಾಮ ಸಭೆಯಲ್ಲಿ ಮಾಡಿದ ಘೋಷಣೆಯಂತೆ, ಗ್ರಾಮದ ಮಾಬುಸಾಬ ಕೊಚಲಾಪೂರ ಹಾಗೂ ಕಲ್ಲಪ್ಪ ಬೆಟಗೇರಿ ಎಂಬುವರು ಶನಿವಾರ ತಲಾ ಒಂದು ಕೆ.ಜಿ ಪ್ಲಾಸ್ಟಿಕ್ ಕೊಟ್ಟು ಒಂದು ಕೆ.ಜಿ ಸಕ್ಕರೆಯನ್ನು ಪಡೆದರು.
ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಇವರಿಬ್ಬರಿಗೂ 1 ಕೆ.ಜಿ ಸಕ್ಕರೆಯನ್ನು ವಿತರಿಸಿ ಮಾತನಾಡಿ, ಪ್ಲಾಸ್ಟಿಕ್ನಿಂದ ಪರಿಸರ ಹದಗೆಡುತ್ತಿದೆ. ಜಮೀನಿನಲ್ಲಿ ಹಲವಾರು ವರ್ಷ ಇದ್ದರೂ ಸಹ ಕೊಳೆಯುದಿಲ್ಲ. ಇದು ತುಂಬಾ ಅಪಾಯಕಾರಿಯಾಗಿದೆ. ಈ ಬಗ್ಗೆ ಸರಕಾರ ಜಾಗೃತಿ ಮೂಡಿಸುತ್ತಾ ಬಂದಿದೆ. ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್ ಹಾಳೆಯನ್ನು ಎಸೆಯಲಾಗುತ್ತಿದೆ. ಇದನ್ನು ತಪ್ಪಿಸಲು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ರೂಪಿಸಲು 1 ಕೆ.ಜಿ ಪ್ಲಾಸ್ಟಿಕ್ನ್ನು ಕೊಟ್ಟರೆ 1 ಕೆ.ಜಿ ಸಕ್ಕರೆಯನ್ನು ನೀಡಲಾಗುತ್ತದೆ ಎಂದು ಕಳೆದ ಗ್ರಾಮ ಸಭೆಯಲ್ಲಿ ಘೋಷಣೆ ಮಾಡಲಾಗಿತ್ತು .ಇದಕ್ಕೆ ಸ್ಪಂದಿಸಿ ಇಬ್ಬರು ನಾಗರಿಕರು ಪ್ಲಾಸ್ಟಿಕ್ ತಂದುಕೊಟ್ಟು ಒಂದು ಕೆ.ಜಿ ಸಕ್ಕರೆಯನ್ನು ತೆಗೆದುಕೊಂಡು ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡಲು ಚಾಲನೆ ನೀಡಿದ್ದಕ್ಕೆ ವಂದನೆಗಳನ್ನು ಸಲ್ಲಿಸಿದರು.
ಅಭಿವೃದ್ಧಿ ಅಧಿಕಾರಿ ಅಮೀರ ನಾಯಕ ಮಾತನಾಡಿ, ಇತಿಹಾಸ ಪ್ರಸಿದ್ಧ ಲಕ್ಕುಂಡಿ ಗ್ರಾಮವನ್ನು ಸ್ವಚ್ಛವಾಗಿಡಲು ಸ್ವಚ್ಛ ಭಾರತ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಸಮುದಾಯವು ಕೈಜೋಡಿಸಬೇಕು ಎಂದು ವಿನಂತಿಸಿಕೊಂಡರು.
ಈ ವೇಳೆ ಗ್ರಾ.ಪಂ ಸದಸ್ಯರು ಹಾಜರಿದ್ದರು.